ಜಾಗೃತಿಯಿಂದ ಮತ ಪ್ರಮಾಣ ಹೆಚ್ಚಳ

>

ವಿಜಯವಾಣಿ ಸುದ್ದಿಜಾಲ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.77.25, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.8 ಮತದಾನಕ್ಕೆ ಸ್ವೀಪ್ ಅಭಿಯಾನದಡಿ ಜಿಲ್ಲಾಡಳಿತ ಮಾಡಿದ ಜಾಗೃತಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಪ್ರಚಾರ ಕಾರಣ.

ರಾಜಕೀಯ ಪಕ್ಷಗಳ ಮುಖಂಡರೂ ಈ ಬಾರಿ ಗರಿಷ್ಠ ಮತದಾನಕ್ಕೆ ಪ್ರಯತ್ನ ನಡೆಸಿದ್ದರು. ನಗರದಲ್ಲಿ ಉತ್ತಮ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಮತದಾನವಾಗಿದೆ.

ವರ್ಷದ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಿದ್ದ ಮತದಾರರು ಅದೇ ಉತ್ಸಾಹದಿಂದ ಮತ್ತೆ ಮತದಾನ ಮಾಡಿರುವುದು ಸ್ಪಷ್ಟ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಶೇ.84.10 ಮತದಾನವಾಗಿದೆ. 2014ರ ಚುನಾವಣೆಗೆ ಹೋಲಿಸಿದರೆ ಬೆಳ್ತಂಗಡಿ, ಮಂಗಳೂರು ಉತ್ತರ ಮತ್ತು ಮಂಗಳೂರು ಕ್ಷೇತ್ರದಲ್ಲಿ ಮತ ಪ್ರಮಾಣ ಜಾಸ್ತಿಯಾಗಿದೆ. ಮೂಡುಬಿದಿರೆ, ಮಂಗಳೂರು ದಕ್ಷಿಣ, ಪುತ್ತೂರು ಕ್ಷೇತ್ರದಲ್ಲಿ ಕೊಂಚ ಕಡಿಮೆಯಾಗಿದ್ದರೆ, ಬಂಟ್ವಾಳ ಮತ್ತು ಸುಳ್ಯ ಕ್ಷೇತ್ರದಲ್ಲಿ ಯಥಾಸ್ಥಿತಿ ಇದೆ.
2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಬೆಳ್ತಂಗಡಿ, ಮೂಡುಬಿದಿರೆ, ಬಂಟ್ವಾಳ ಮತ್ತು ಪುತ್ತೂರು ಕ್ಷೇತ್ರದಲ್ಲಿ ಮತ ಪ್ರಮಾಣ ಕೊಂಚ ಕಡಿಮೆಯಾಗಿದ್ದರೆ, ಸುಳ್ಯ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಧಿಕ ಮತದಾನವಾಗಿದೆ. ಮಂಗಳೂರು ಕ್ಷೇತ್ರದಲ್ಲಿ ಯಥಾಸ್ಥಿತಿ ಇದೆ.

ಪಕ್ಷಗಳ ಲೆಕ್ಕಚಾರ
ರಾಜಕೀಯ ಪಕ್ಷಗಳ ಚರ್ಚೆ ಈಗ ಮತದಾನದ ಪರ್ಸಂಟೇಜ್ ಮೇಲೆ ಕೇಂದ್ರೀಕೃತವಾಗಿದೆ. ಮತದಾನದ ಪ್ರಮಾಣ ಹೆಚ್ಚಳವಾದ ಕಾರಣ ಭಾರಿ ಏರುಪೇರಿನ ಫಲಿತಾಂಶ ಬರಬಹುದೆಂದು ನಿರೀಕ್ಷಿಸಲಾಗಿದೆ. ಮತದಾನದಲ್ಲಿ ಶೇಕಡವಾರು ಹೆಚ್ಚಳ ಕಾಂಗ್ರೆಸ್ ಮತ್ತು ಬಿಜೆಪಿ ಪೈಕಿ ಯಾರಿಗೆ ಲಾಭ ತರಲಿದೆ ಎನ್ನುವುದಕ್ಕೆ ಮೇ 23ರಂದು ಉತ್ತರ ದೊರೆಯಲಿದೆ.

ಸಾಯಂಕಾಲ ವೇಳೆ ಚುರುಕು
ಮುಂಜಾನೆಯಿಂದಲೇ ದ.ಕ ಜಿಲ್ಲೆಯ ಹಲವು ಮತಗಟ್ಟೆಗಳಲ್ಲಿ ಉದ್ದ ಸರತಿ ಸಾಲು ಕಂಡು ಬಂದಿದ್ದು, ಉತ್ತಮ ಮತದಾನವಾಗುವ ಎಲ್ಲ ಲಕ್ಷಣಗಳೂ ಕಂಡುಬಂದಿತ್ತು. ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆ ವೇಳೆಗೆ ಶೇ.15.49 ಮತದಾನವಾಗಿದ್ದರೆ, 11 ಗಂಟೆಗೆ ಶೇ.32.34 ಮತದಾನವಾಗಿತ್ತು. ಮಧ್ಯಾಹ್ನ ವೇಳೆಗೆ ಸಹಜವಾಗಿ ಮಂದಗತಿ ಇದ್ದರೂ ಸಾಯಂಕಾಲದ ವೇಳೆಗೆ ಚುರುಕು ಪಡೆಯಿತು. ಮಧ್ಯಾಹ್ನ 1ಗಂಟೆಗೆ ಶೇ.48.85, ಮೂರು ಗಂಟೆಗೆ ಶೇ.60 ಹಾಗೂ ಸಾಯಂಕಾಲ 5 ಗಂಟೆಗೆ ಶೇ.72 ಮತದಾನವಾಗಿತ್ತು.

Leave a Reply

Your email address will not be published. Required fields are marked *