ಗುಳೇದಗುಡ್ಡ: ವಿದ್ಯಾರ್ಥಿಗಳು ಶ್ರದ್ಧೆ, ಏಕಾಗ್ರತೆಯಿಂದ ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಯಶಸ್ಸುಗಳಿಸಲು ಸಾಧ್ಯ. ಜೀವನದಲ್ಲಿ ಅಂಕಗಳಿಸುವುದರ ಜತೆಗೆ ಜ್ಞಾನ ವಿಸ್ತರಿಸಿಕೊಳ್ಳಬೇಕು. ಅದಕ್ಕೆ ನಿರಂತರ ಓದು ಅವಶ್ಯ ಎಂದು ಡಾ. ರುದ್ರೇಶ ಮೇಟಿ ಹೇಳಿದರು.

ಸ್ಥಳೀಯ ಅಂಜುಮನ್-ಎ- ಇಸ್ಲಾಂ ಕಮೀಟಿ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಪಡೆದ ಸಮಾಜದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ಬಡತನವಿದ್ದರೂ ಪಾಲಕರು ಮಕ್ಕಳಿಗೆ ಶಿಕ್ಷಣ ವಂಚಿತರನ್ನಾಗಿ ಮಾಡಬಾರದು. ಇಂದು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳಿದ್ದು ಅವುಗಳನ್ನು ಪಡೆದು ಉತ್ತಮ ಶಿಕ್ಷಣವಂತರಾಗಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಇಡೀ ಕುಟುಂಬ ಶಿಕ್ಷಣ ಪಡೆದಂತಾಗುತ್ತದೆ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.
ಅಂಜುಮನ್-ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಕೆ.ಆರ್. ರಾಯಚೂರ ಮಾತನಾಡಿ, ಸಮಾಜದ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ಪಾಲಕರು ತಮ್ಮ ಕಷ್ಟನಷ್ಟ ಏನೇ ಇದ್ದರೂ ಮಕ್ಕಳಿಗೆ ಶಿಕ್ಷಣ ನೀಡಿ, ಸಮಾಜ ಅಭಿವೃದ್ಧಿ ಪಡಿಸುವಲ್ಲಿ ಕೈಜೋಡಿಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಅಲಿಜಾ ಕಲ್ಬುರ್ಗಿ, ಮುನ್ನಿ ಹಣಗಿ, ರಶೀದ್ ಅಹಮದ ಹೊಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಮಿಟಿ ಉಪಾಧ್ಯಕ್ಷ ಎಂ.ಎಂ. ಮೌಲ್ವಿ, ಎಚ್.ಎಂ. ಸಾದನಿ, ಆರ್.ಎಚ್. ಮಕಾನದಾರ, ಎಂ.ಎ. ಹೊನವಾಡ, ಜೆ.ಐ. ಇಲಕಲ್ಲ, ಬಿ.ಜಿ. ಕಲಬುರ್ಗಿ, ಎಲ್.ಎ. ಇಲಕಲ್ಲ, ವೈ. ಎ. ಮಾಲದಾರ, ಎ.ಎಂ. ಬಲಕುಂದಿ, ಎಂ.ಎನ್. ಹಣಗಿ, ಯು.ಎ. ಡಾಲಾಯತ, ಎ.ಎಂ. ಇಲಕಲ್ಲ, ಬಿ.ಎ. ಬಾಗವಾನ, ಆರ್.ಜಿ. ಮುಂಡಾಸದ, ಕೆ.ಜೆ. ಅಮಿನಗಡ, ಎಂ.ಕೆ. ತಹಸೀಲ್ದಾರ್ ಮತ್ತಿತರರು ಇದ್ದರು.