ಶಿವಮೊಗ್ಗ: ಸಂಸ್ಕೃತ ಕಲಿಯುವುದರಿಂದ ನಮ್ಮ ಜ್ಞಾನ ಭಂಡಾರ ಹೆಚ್ಚುತ್ತದೆ ಎಂದು ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ವಿ. ಶಂಕರನಾರಾಯಣ ತಿಳಿಸಿದರು
ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಹಯೋಗದಲ್ಲಿ ಒಂದು ತಿಂಗಳ ಸಂಸ್ಕೃತೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಪಂಚದ ಎಲ್ಲ ಭಾಷೆಗಳಿಗಿಂತ ಶ್ರೇಷ್ಠವಾದ ಭಾಷೆ ಎನಿಸಿದ ಸಂಸ್ಕೃತವನ್ನು ಕಲಿತರೆ ಅಪಾರ ಜ್ಞಾನ ಬಂಡಾರ ಲಭಿಸುತ್ತದೆ ಎಂದು ಹೇಳಿದರು.
ಸಂಸ್ಕೃತ ಒಂದು ವೈಜ್ಞಾನಿಕ ಭಾಷೆ. ಈ ಭಾಷೆಯನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸುವ ವ್ಯವಸ್ಥೆಯನ್ನು ಮಾಡಬೇಕು. ಸಂಸ್ಕೃತ ಉಚ್ಚಾರಣೆಯಿಂದ ಸ್ಪಷ್ಟವಾದ ವಾಕ್ಯಗಳನ್ನು ಹೇಳಲು ಸಹಕಾರಿಯಾಗುತ್ತದೆ. ಸಂಸ್ಕೃತವನ್ನು ಅತಿ ಕಡಿಮೆ ಅವಧಿಯಲ್ಲಿ ಸುಲಭವಾಗಿ ಕಲಿಸಿಕೊಡುವ ಕೆಲಸವನ್ನು ಕಳೆದ 35 ವರ್ಷಗಳಿಂದ ಶಿವಮೊಗ್ಗ ನಗರದಲ್ಲಿರುವ ಸಂಸ್ಕೃತ ಭಾರತಿ ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಮಾಡುತ್ತಿದೆ ಎಂದರು.
ಪತ್ರಾಲಯ ಶಿಕ್ಷಣ, ಸಂಸ್ಕೃತ ಸಂಭಾಷಣಾ ಶಿಬಿರ, ಬಾಲಕೇಂದ್ರ, ಪ್ರಾಥಮಿಕ ಶಾಲೆಗಳಲ್ಲಿ ಸಂಸ್ಕೃತ, ಸಾಹಸ ಮತ್ತು ಸಂಸ್ಕೃತ ಮುಂತಾದ ಯೋಜನೆಗಳ ಮೂಲಕ ಜನರನ್ನು ತಲುಪಲಾಗುತ್ತಿದೆ ಎಂದು ಹೇಳಿದರು.
ಸಂಸ್ಕೃತ ಭಾರತಿಯ ಶಿವಮೊಗ್ಗ ನಗರ ಸಂಯೋಜಕಿ ವಿಮಲಾ ರೇವಣಕರ್, ಜಿಲ್ಲಾ ಸಹ ಸಂಯೋಜಕಿ ಪ್ರೇಮಾ ವಿಜಯಕುಮಾರ್, ಪೂರ್ಣಾವಧಿ ಕಾರ್ಯಕರ್ತ ರಾಮಕೃಷ್ಣ, ವನಿತಾ ರಾಮಕೃಷ್ಣ, ಮನುಬಾಯಿ ಚವ್ಹಾಣ್, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಕಾರ್ಯಕರ್ತರಾದ ಪ್ರತಾಪ್, ಮಂಜುನಾಥ್ ಉಪಸ್ಥಿತರಿದ್ದರು.