ಗೋಣಿಕೊಪ್ಪ: ಪರಿಸರ ಕಾಳಜಿಯೊಂದಿಗೆ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಿದಲ್ಲಿ ಆದಾಯದ ಮೂಲ ಹೆಚ್ಚಾಗಲಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಇಲ್ಲಿನ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಶನಿವಾರ ಹಿಂದು ಎಕನಾಮಿಕ್ ಫಾರ್ಮ್, ಲಘು ಉದ್ಯೋಗ ಭಾರತಿ ಮೈಸೂರು ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯಮಶೀಲ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಉದ್ಯಮಶೀಲರಾಗಿ ಬದುಕು ಕಟ್ಟಿಕೊಳ್ಳಬೇಕು. ಜತೆಗೆ ಮತ್ತೊಬ್ಬರಿಗೆ ಉದ್ಯೋಗಾವಕಾಶ ನೀಡುವಂತಾಗಬೇಕು. 2047ರ ವಿಕಸಿತ ಭಾರತ ಇದೇ ಕಲ್ಪನೆಯಾಗಿದೆ ಎಂದು ಹೇಳಿದರು.
ಕೊಡಗಿಗೆ ತನ್ನದೇ ಆದ ವೈಶಿಷ್ಟೃವಿದೆ. ಯುವ ಸಮುದಾಯ ಹಲವು ಕನಸು ಕಾಣುತ್ತಿದ್ದು, ಅಂತಹ ಕನಸು ನನಸಾಗಲು ವಿವಿಧ ಸ್ಥರಗಳಲ್ಲಿ ಅನೇಕ ರೀತಿಯ ಉತ್ಪನ್ನಗಳನ್ನು ಉತ್ಪಾದಿಸುವ ಹಾಗೂ ಮಾರಾಟ ಮಾಡುವ ಮೂಲಕ ಉದ್ಯಮಿಗಳಾಗಿ ಹೊರಹೊಮ್ಮಬೇಕು. ಕೊಡಗಿನಲ್ಲಿ ಇದಕ್ಕಾಗಿ ವಿಫುಲ ಅವಕಾಶವಿದೆ. ಸರ್ಕಾರದಿಂದ ಉದ್ದಿಮೆದಾರರಿಗೆ ಪೂರ್ಣ ಸಹಕಾರ ಸಿಗಲಿದ್ದು, ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಉದ್ಯಮಿಗಳು ಹೆಚ್ಚಾಗಿ ಹೊರಹೊಮ್ಮಬೇಕು ಎಂದು ಹೇಳಿದರು.
ಚಿಕ್ಕಅಳುವಾರ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಆಳೂರು ಮಾತನಾಡಿ, ಕೊಡಗಿನ ಯುವಕ-ಯುವತಿಯರಿಗೆ ಸಾಮರ್ಥ್ಯವರ್ಧನೆ ಸಿಗುವಂತಾಗಬೇಕು. ಕೊಡಗಿನಲ್ಲಿ ಜೇನು ಸಾಕಣೆ, ಉತ್ಪಾದನೆ, ಗೊಬ್ಬರ ತಯಾರಿಕೆ, ಔಷಧ ಗುಣ ಹೊಂದಿರುವ ಗಿಡಗಳ ಉತ್ಪಾದನೆ, ಹಣ್ಣು-ತರಕಾರಿ ರಪ್ತುಗಾರಿಕೆ ಸೇರಿದಂತೆ ಅನೇಕ ರೀತಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಆ ಮೂಲಕ ಕೊಡಗಿನಲ್ಲಿ ಉದ್ಯಮ ಬೆಳೆಸುವಂತಾಗಬೇಕು ಎಂದರು.
ವಿಶ್ವವಿದ್ಯಾಲಯಗಳು ಶಿಕ್ಷಣ ಕೊಡುವ ಸಂಸ್ಥೆಗಳಲ್ಲ. ಬದಲಾಗಿ ಉದ್ಯಮಿಗಳನ್ನು ಸೃಷ್ಟಿ ಮಾಡುವ ಕೇಂದ್ರ. ಮುಂದಿನ ಸಾಲಿನಲ್ಲಿ ಆಸಕ್ತರಿಗೆ ವಿಶ್ವವಿದ್ಯಾಲಯದಲ್ಲಿ 2 ದಿನ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು ಎಂದರು.
ಹಿಂದು ಎಕನಾಮಿಕ್ ಫಾರ್ಮ್‌ನ ಕೊಡಗು ಜಿಲ್ಲಾಧ್ಯಕ್ಷ ಡಾ.ಶ್ಯಾಂ ಅಪ್ಪಣ್ಣ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಷಯ ತಜ್ಞರಾದ ಕೆ.ದೇವರಾಜ್, ಸಿಎಫ್‌ಟಿಆರ್‌ಐನ ಮುಖ್ಯಸ್ಥ ಡಾ.ಪುಷ್ಪಾ ಎಸ್.ಮೂರ್ತಿ, ಖಾದಿ ಗ್ರಾಮೋದ್ಯೋಗ ನಿರ್ದೇಶಕರಾದ ಡಾ.ಮೋಹನ್‌ರಾವ್, ಸಿಎಸ್‌ಐಆರ್‌ನ ಮುಖ್ಯಸ್ಥ ಡಾ.ಪಿ.ಎಸ್.ನೇಗಿ, ಖಾದಿ ಮಂಡಳಿ ಗ್ರಾಮೋದ್ಯೋಗ ನಿರ್ದೇಶಕ ಎಚ್.ಆರ್.ರಾಜಪ್ಪ, ಮಹಾರಾಷ್ಟ್ರ ಬ್ಯಾಂಕ್‌ನ ವಿಭಾಗೀಯ ಮುಖ್ಯಸ್ಥ ಚಿರುಕುಲ ಯೋಗೇಶ್‌ಬಾಬು, ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿದರು.
ಹಿಂದು ಎಕನಾಮಿಕ್ ಫಾರ್ಮ್‌ನ ಕೊಡಗಿನ ಕಾರ್ಯಾಧ್ಯಕ್ಷ ಟಿ.ಕೆ.ಸುಧೀರ್, ಉಪಾಧ್ಯಕ್ಷೆ ಛಾಯಾ ನಂಜಪ್ಪ, ಡಾ.ರೇವತಿ ಪೂವಯ್ಯ, ಡಾ.ನಯನಾ ತಿಮ್ಮಯ್ಯ ಹಾಗೂ ಡಾ.ಸೀಮಾ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಪಂ ಮಾಜಿ ಸದಸ್ಯ ಕಾಂತಿ ಸತೀಶ್, ಉದ್ಯಮಿ ಹರಪಳ್ಳಿ ರವೀಂದ್ರ ಇತರರಿದ್ದರು.