ಹೆಚ್ಚುತ್ತಿದೆ ಬಿಸಿಲ ಧಗೆ

ಮಂಗಳೂರು: ಕರಾವಳಿಯ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಬೇಸಿಗೆ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಒಂದು ದಿನ ಜೋರಾಗಿ ಮಳೆ ಸುರಿದರೆ ಎರಡು ದಿನ ಮಳೆ ನಾಪತ್ತೆ! ಇವೆಲ್ಲದರ ಪರಿಣಾಮ ಬಿಸಿಲಿನ ಪ್ರಮಾಣದಲ್ಲಿ ವಿಪರೀತ ಏರಿಕೆಯಾಗಿದೆ.
ಮಾರ್ಚ್ ತಿಂಗಳಲ್ಲಿ 34-35 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ದಿನದ ಗರಿಷ್ಠ ಉಷ್ಣಾಂಶ ಏಪ್ರಿಲ್ ತಿಂಗಳಲ್ಲಿ 36ರಿಂದ 37ರ ಗಡಿ ತಲುಪಲು ಹವಣಿಸುತ್ತಿದೆ. ಇದೇ ವೇಳೆ ಕನಿಷ್ಠ ಉಷ್ಣಾಂಶ 26ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪಿದೆ. ಬೆಳಗ್ಗೆ 9 ಗಂಟೆಯ ಅವಧಿಯಲ್ಲೇ ಸೆಖೆಯ ಅನುಭವವಾಗುತ್ತದೆ. ರಾತ್ರಿ ವೇಳೆಯೂ ವಾತಾರವಣದಲ್ಲಿ ವಾತಾವರಣದಲ್ಲಿ ಸೆಖೆಯ ಅನುಭವವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿಯೂ ಇದೇ ಅನುಭವ.
ಕಳೆದ ವರ್ಷವೂ ಏಪ್ರಿಲ್ ತಿಂಗಳಲ್ಲಿ ಸೆಖೆ ವಾತಾವರಣವಿತ್ತು. ಆದರೆ ಘಟ್ಟದ ತಪ್ಪಲಿನ ಭಾಗಗಳಲ್ಲಿ ಪ್ರತಿ ದಿನ ಎಂಬಂತೆ ಮಳೆಯಾಗಿತ್ತು. ಏಪ್ರಿಲ್ ತಿಂಗಳ ಮೊದಲ 20 ದಿನಗಳಲ್ಲಿ ದ.ಕ.ಜಿಲ್ಲೆಯಲ್ಲಿ 65.84ಮಿಮೀ, ಉಡುಪಿಯಲ್ಲಿ 37.55 ಮಿಮೀ ಮಳೆಯಾಗಿತ್ತು. ಇದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿರಲಿಲ್ಲ. ಆದರೆ ಬಾರಿ ಈ ಬಾರಿ ಏ.1ರಿಂದ 16ರ ವರೆಗೆ ಸರಾಸರಿ 14 ಮಿಮೀ ಮಳೆಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಈಗಾಗಲೇ ಸ್ಥಗಿತಗೊಂಡಿದೆ.

ಏಪ್ರಿಲ್‌ನಲ್ಲೇ ಗರಿಷ್ಠ ಉಷ್ಣಾಂಶ: ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಏಪ್ರಿಲ್ ತಿಂಗಳ ಗರಿಷ್ಠ ಉಷ್ಣಾಂಶ 37.5 ಡಿಗ್ರಿ ಸೆಲ್ಸಿಯಸ್ 2013ರ ಏ.27ರಂದು ದಾಖಲಾಗಿತ್ತು. ಇದು ಏಪ್ರಿಲ್ ತಿಂಗಳ ಸಾರ್ವಕಾಲಿಕ ದಾಖಲೆಯೂ ಹೌದು. 2016ರ ಏ.21ರಂದು 37 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈ ವರ್ಷ 36.9ರ ವರೆಗೆ ತಲುಪಿತ್ತು. ಆ.18-20ರ ವರೆಗೆ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಬಹುದು ಎನ್ನುತ್ತಾರೆ ಹವಾಮಾನ ಇಲಾಖೆ ವಿಜ್ಞಾನಿಗಳು.

ನಿರ್ಜಲೀಕರಣ ತಪ್ಪಿಸಲು ನೀರು ಸೇವನೆ: ಬಿಸಿಲ ಝಳಕ್ಕೆ ಮನೆಯಿಂದ ಹೊರಗೆ ಬರಲು ಭಯ ಪಡುವಂತಾಗಿದೆ. ಬಿಸಿಲಿಗೆ ಹೋಗುವುದಕ್ಕಿಂತ ಫ್ಯಾನ್, ಎಸಿ ಅಡಿಯಲ್ಲೇ ಇರಲು ಬಯಸುತ್ತಿದ್ದಾರೆ. ಜತೆಗೆ, ಸೀಯಾಳ, ಕಬ್ಬು ಜ್ಯೂಸ್, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬಿಸಿಲಿಗೆ ಹೆಚ್ಚು ಬೆವರು ಬರುವುದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಸಾಧ್ಯತೆಯಿದೆ. ಹೆಚ್ಚು ನೀರು ಕುಡಿಯುವ ಜತೆಗೆ, ನೀರಿನ ಅಂಶ ಹೆಚ್ಚಿರುವ ಆಹಾರ ವಸ್ತುಗಳ ಸೇವನೆ ಅವಶ್ಯ ಎನ್ನುತ್ತಾರೆ ವೈದ್ಯರು.

ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ಈ ಬಾರಿ ಕರಾವಳಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಸ್ವಲ್ಪ ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ-ಕನಿಷ್ಠ ಉಷ್ಣಾಂಶದಲ್ಲಿ ವ್ಯತ್ಯಯವಾಗಿದೆ. ಮಳೆಯಾಗದಿದ್ದರೆ ಉಷ್ಣಾಂಶದಲ್ಲಿ ಇನ್ನಷ್ಟು ಏರಿಕೆ ಉಂಟಾಗಬಹುದು.
ಸುನೀಲ್ ಗಾವಸ್ಕರ್ ವಿಜ್ಞಾನಿ, ಕೆಎಸ್‌ಎನ್‌ಡಿಎಂಸಿ

ಹಗಲು ಹೊತ್ತು ಬಿಸಿಲಿನ ಧಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನವರು ಬಿಸಿಲಿಗೆ ಮನೆಯಿಂದ ಹೊರಬರಲು ಹೆದರುತ್ತಾರೆ. ಸಹಜವಾಗಿ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ಮಳೆ ಆರಂಭವಾಗಲು ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯವಿದ್ದು, ಬಿಸಿಲಿನಿಂದ ಏನೆಲ್ಲ ಸಂಭವಿಸುವುದೋ ಗೊತ್ತಿಲ್ಲ.
ಪ್ರವೀಣ್ ಹೋಟೆಲ್ ಮಾಲೀಕ, ಮಂಗಳೂರು