ಶಿವಮೊಗ್ಗ: ಪಿಎಂ ಸ್ವನಿಧಿ ಯೋಜನೆಯಡಿ ಸಾಲ ವಿತರಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಕೇಂದ್ರ ಸರ್ಕಾರದ ಉದ್ದೇಶ ಸಫಲವಾಗುವ ನಿಟ್ಟಿನಲ್ಲಿ ಬ್ಯಾಂಕರ್‌ಗಳು ಆಸಕ್ತಿ ವಹಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.
ಲೀಡ್ ಬ್ಯಾಂಕ್‌ನಿಂದ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಿಎಂ ಸ್ವನಿಧಿಯ ಮೊದಲ ಕಂತು ಪಡೆಯುವವರ ಸಂಖ್ಯೆ ಹೆಚ್ಚಿದೆ. ಆದರೆ ಎರಡು ಹಾಗೂ ಮೂರನೇ ಕಂತಿನಲ್ಲಿ ಸಾಲ ಪಡೆಯುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.
ಮೊದಲ ಕಂತಿನಲ್ಲಿ ಶೇ. 91 ಜನರಿಗೆ ಅಂದರೆ 9,925 ಫಲಾನುಭವಿಗಳಿಗೆ 10 ಸಾವಿರ ರೂ. ಸಾಲ ದೊರೆತಿದೆ. ಇದನ್ನು ಮರುಪಾವತಿಸಿದ 3,408 ಮಂದಿಗೆ ಎರಡನೇ ಕಂತಿನಲ್ಲಿ 20 ಸಾವಿರ ರೂ. ಸಾಲ ಸಿಕ್ಕಿದೆ. ಆದರೆ ಮೂರನೇ ಕಂತಿನಲ್ಲಿ 937 ಜನ ಮಾತ್ರ 50 ಸಾವಿರ ರೂ. ಸಾಲ ಪಡೆದಿದ್ದಾರೆ. ಈ ಕುಸಿತಕ್ಕೆ ಕಾರಣಗಳೇನು ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಬ್ಯಾಂಕ್‌ಗಳು ಆದ್ಯತಾ ವಲಯಗಳಾದ ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಉತ್ತಮ ಸಾಧನೆ ತೋರಬೇಕು. ಸಿಡಿ (ಕ್ರೆಡಿಟ್, ಡಿಪಾಸಿಟ್) ಅನುಪಾತ ಹೆಚ್ಚಿಸಬೇಕು. ಫಲಾನುಭವಿಗಳಿಗೆ ಅನುಕೂಲಕರ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದರು.
ಮುದ್ರಾ ಯೋಜನೆಯಡಿ ಶಿಶು, ಕಿಶೋರ ಮತ್ತು ತರುಣ್ ಘಟಕದಲ್ಲಿ ಒಟ್ಟು 1,07,038 ಖಾತೆಗಳಿದ್ದು, 11.33 ಕೋಟಿ ರೂ. ಸಾಲ ನೀಡಲಾಗಿದೆ. ಇದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪ್ರಗತಿ ಕಡಿಮೆಯಿದೆ. ಹೀಗಾಗಿ ಮಾನದಂಡಗಳನ್ನು ಕೊಂಚ ಸಡಿಲಿಸಬೇಕು. ತ್ವರಿತ ಸಾಲ ಸೌಲಭ್ಯ ಒದಗಿಸಬೇಕು ಎಂದರು. ಜಿಪಂ ಸಿಇಒ ಎನ್.ಹೇಮಂತ್, ಕೆನರಾ ಬ್ಯಾಂಕ್ ಡಿಜಿಎಂ ಆರ್,ದೇವರಾಜ್, ಆರ್‌ಬಿಐ ಎಲ್‌ಡಿಒ ಬಾಬುಲ್ ಬೊರ್ಡ್, ನಬಾರ್ಡ್ ಡಿಡಿಎಂ ಶರತ್ ಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಚಂದ್ರಶೇಖರ ಉಪಸ್ಥಿತರಿದ್ದರು.