ಅಪೂರ್ಣ ರಸ್ತೆ ಕಾಮಗಾರಿಯಿಂದ ಅಪಾಯ

< ಚರಂಡಿ ತಡೆಗೋಡೆಯಲ್ಲಿ ಹೊರಚಾಚಿರುವ ಕಬ್ಬಿಣದ ಸರಳು>

ಆರ್.ಬಿ. ಜಗದೀಶ್, ಕಾರ್ಕಳ

ಕಾರ್ಕಳ-ಉಡುಪಿ ನಡುವಿನ ನೀರೆ ಗುಡ್ಡೆಯಂಗಡಿವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮೊಟಕುಗೊಂಡು ತಿಂಗಳುಗಳೇ ಕಳೆದಿವೆ. ಸುಗಮ ಸಂಚಾರಕ್ಕೆ ಅನುವು ಆಗುವ ರೀತಿ ನಡೆಯಬೇಕಾಗಿದ್ದ ಈ ಕಾಮಗಾರಿ ಪ್ರಸಕ್ತ ಅಪಾಯ ಆಹ್ವಾನಿಸುತ್ತಿದೆ.

ಕಾರ್ಕಳ ಅಯ್ಯಪ್ಪನಗರದಿಂದ ಬೈಲೂರು-ನೀರೆ ಗುಡ್ಡೆಯಂಗಡಿವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿತ್ತು. ಅದಕ್ಕೆ ಅನುಕೂಲವಾಗಿ ರಸ್ತೆ ಮಧ್ಯೆ ನೂತನ ಚರಂಡಿ ನಿರ್ಮಿಸಲಾಗಿತ್ತು. ಚರಂಡಿ ಮೇಲ್ಮುಖವಾಗಿ ಕಬ್ಬಿಣದ ತಡೆಗೋಡೆ ನಿರ್ಮಿಸಲು ಕಾರ್ಯಕ್ಕೆ ಅಗತ್ಯವಾದ ಕಬ್ಬಿಣದ ಸರಳು ಜೋಡಣೆ ಮಾಡಲಾಗಿತ್ತು. ಕಾಮಗಾರಿ ಮೊಟಕುಗೊಂಡಿರುವುದರಿಂದ ಸರಳುಗಳು ಬಾನೆತ್ತರಕ್ಕೆ ಚಾಚಿಕೊಂಡಿವೆ.

ಅಪಾಯಕಾರಿ ರಸ್ತೆ : ಅಯ್ಯಪ್ಪನಗರದಿಂದ ಬೈಲೂರುವರೆಗೆ ಹಲವು ಕಡೆ ರಸ್ತೆ ಮಧ್ಯ ಚರಂಡಿ ನಿರ್ಮಿಸಲಾಗಿದ್ದು, ಎರಡೂ ಕಡೆ ಕಬ್ಬಿಣದ ಸರಳುಗಳು ಹೊರ ಚಾಚಿಕೊಂಡಿರುವುದರಿಂದ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಈ ಕುರಿತು ಸ್ಥಳೀಯರು ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಕೇಂದ್ರೀಯ ರಸ್ತೆ ನಿಧಿ: ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ 25 ಕೋಟಿ ರೂ. ವೆಚ್ಚದಲ್ಲಿ ಅಯ್ಯಪ್ಪನಗರದಿಂದ ಬೈಲೂರು-ನೀರೆ ಗುಡ್ಡೆಯಂಗಡಿ ತನಕ ಅಂದರೆ ಕಾರ್ಕಳ-ಉಡುಪಿ ತಾಲೂಕಿನ ಗಡಿಭಾಗದವರೆಗೆ ರಸ್ತೆ ವಿಸ್ತರಣೆ ಇದರಲ್ಲಿ ಒಳಗೊಂಡಿದೆ. ಶಾಸಕ ಸುನೀಲ್ ಕುಮಾರ್ ಮುತುವರ್ಜಿಯಿಂದ ಕೇಂದ್ರ ಸರ್ಕಾರ ದೊಡ್ಡ ಮೊತ್ತದ ಅನುದಾನ ಬಿಡುಗಡೆಗೊಳಿಸಿದೆ. ಕಾರಣಾಂತರಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ.

ಕುಕ್ಕುಂದೂರು ಮಸೀದಿ ಸಮೀಪ ನಿರ್ಮಾಣವಾದ ಅಪೂರ್ಣ ಚರಂಡಿ ಕಾಮಗಾರಿ ಮಳೆಗಾಲದಲ್ಲಿ ಅಪಾಯ ತಂದೊಡ್ಡಿದೆ. ಶಾಲಾ ವಿದ್ಯಾರ್ಥಿಗಳು ಇದೇ ಚರಂಡಿಯಲ್ಲಿ ಇಳಿಯುವ ಪ್ರಯತ್ನ ನಡೆಸುತ್ತಾರೆ. ಕೆಲ ದಿನಗಳ ಹಿಂದೆ ವಿದ್ಯಾರ್ಥಿಯೊಬ್ಬ ಚರಂಡಿ ಮಣ್ಣಿಗೆ ಸಿಲುಕಿಕೊಂಡಿದ್ದ. ಚಾಚಿಕೊಂಡ ಸರಳನ್ನು ಗುರುತಿಸುವ ಸಲುವಾಗಿ ಕೆಂಪು ರಿಬ್ಬನ್‌ಗಳನ್ನು ಕಟ್ಟಬೇಕು.
ರಜಾಕ್ ಸ್ಥಳೀಯ ನಿವಾಸಿ

ಅಯ್ಯಪ್ಪನಗರದಿಂದ ಬೈಲೂರು ಗುಡ್ಡೆಯಂಗಡಿವರೆಗಿನ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಬಗ್ಗೆ ಇದುವರೆಗೆ ಕೇಂದ್ರೀಯ ರಸ್ತೆ ಪ್ರಾಧಿಕಾರ ಯಾವುದೇ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿಲ್ಲ. ಒಡಂಬಡಿಕೆ ಮುನ್ನವೇ ಕಾಮಗಾರಿ ಆರಂಭಗೊಂಡಿದ್ದು, ಗುತ್ತಿಗೆದಾರರು ಅಕಾಲಿಕ ನಿಧನ ಹೊಂದಿದ್ದಾರೆ. ಇದೇ ಕಾರಣದಿಂದ ಕಾಮಗಾರಿ ಕುಂಠಿತವಾಗಿದೆ. ಚರಂಡಿ ನಿರ್ಮಾಣ ಸಂದರ್ಭ ಬಾಕಿ ಉಳಿದ ಕಬ್ಬಿಣದ ಸರಳುಗಳನ್ನು ಕತ್ತರಿಸುವ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುತ್ತೇನೆ.
ನಾಗರಾಜ ನಾಯ್ಕ
ಅಭಿಯಂತ, ಕೇಂದ್ರೀಯ ರಸ್ತೆ ಪ್ರಾಧಿಕಾರ ಶಿವಮೊಗ್ಗ ವಿಭಾಗ