ಸಹಕಾರಿ ಸಂಘಕ್ಕೂ ಆದಾಯ ಕರ!

ಪಿ.ಬಿ.ಹರೀಶ್ ರೈ ಮಂಗಳೂರು

ಲಾಭದಲ್ಲಿ ಮುನ್ನಡೆಯುತ್ತಿರುವ ಅವಿಭಜಿತ ದ.ಕ.ಜಿಲ್ಲೆಯ ಸೇವಾ ಸಹಕಾರಿ ಸಂಘಗಳು ಸದ್ಯ ಆತಂಕದ ದಿನಗಳನ್ನು ಎದುರಿಸುತ್ತಿವೆ. ಸಂಘಗಳು ಲಾಭಾಂಶದಲ್ಲಿ ಶೇ.30ರಷ್ಟು ಆದಾಯ ಕರ ಪಾವತಿಸಲು ಆದಾಯ ತೆರಿಗೆ ಇಲಾಖೆ ನೀಡಿದ ಆದೇಶವೇ ಈ ಆತಂಕಕ್ಕೆ ಕಾರಣ!

ರೈತ ಸದಸ್ಯರಿಂದ ರೂಪುಗೊಂಡ ಸೇವಾ ಸಹಕಾರಿ ಸಂಘಗಳು ಮತ್ತು ಕೃಷಿ ಪತ್ತಿನ ಸಹಕಾರಿ ಸಂಘಗಳು ಲಾಭದ ಉದ್ದೇಶ ಹೊಂದಿರುವುದಿಲ್ಲ. ರೈತರಿಗೆ ಸಾಲ ನೀಡಿ ಅಲ್ಪ ಲಾಭ ಪಡೆಯುತ್ತಿರುವ ಈ ಸಂಘಗಳು ಆದಾಯ ಕರ ಪಾವತಿಯಿಂದ ವಿನಾಯಿತಿ ಹೊಂದಿದ್ದವು. ಆದರೆ, ಈಗ ಆಂಧ್ರಪ್ರದೇಶದ ಸಿಟಿಜನ್ ಕೋ ಅಪರೇಟಿವ್ ಸೊಸೈಟಿ ಪ್ರಕರಣದ ತೀರ್ಪು ಉಲ್ಲೇಖಿಸಿ ಆದಾಯ ತೆರಿಗೆ ಇಲಾಖೆ ಸೇವಾ ಸಹಕಾರಿ ಸಂಘಗಳಿಗೆ ನೋಟಿಸ್ ಜಾರಿ ಮಾಡುತ್ತಿದೆ.

ಏನಿದು ಸಿಟಿಜನ್ ಪ್ರಕರಣ?: ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಟಿಜನ್ ಕೋ ಅಪರೇಟಿವ್ ಸೊಸೈಟಿ ವಿರುದ್ಧ ನಾಗರಿಕರೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸೊಸೈಟಿ ಸದಸ್ಯೇತರ ಗ್ರಾಹಕರನ್ನು ಹೊಂದಿದೆ. ಇಂತಹ ಸದಸ್ಯರು ಸೊಸೈಟಿಗೆ ಮತದಾನದ ಅವಕಾಶ ಹೊಂದಿಲ್ಲ. ಹಾಗಾಗಿ ಆದಾಯ ಕರದ ವ್ಯಾಪ್ತಿಯಲ್ಲಿ ಈ ಸೊಸೈಟಿಯನ್ನು ಪರಿಗಣಿಸಬೇಕು ಎನ್ನುವುದು ಅವರ ವಾದ. ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಸಿಟಿಜನ್ ಕೋ ಅಪರೇಟಿವ್ ಸೊಸೈಟಿಗೆ ಆದಾಯ ಕರ ಪಾವತಿಸಲು ಸೂಚಿಸಿತ್ತು. ಈ ತೀರ್ಪು ಈಗ ಸಹಕಾರಿ ಸಂಘಗಳಿಗೆ ಮುಳುವಾಗಿದೆ.

ಮಾನದಂಡ ಸರಿಯಲ್ಲ: ಸಿಟಿಜನ್ ಕೋ ಅಪರೇಟಿವ್ ಸೊಸೈಟಿಯ ತೀರ್ಪು ಮಾನದಂಡವಾಗಿಸಿ ಸೇವಾ ಸಹಕಾರಿಗಳಿಗೆ ಆದಾಯ ಕರ ವಿಧಿಸುವುದು ಸರಿಯಲ್ಲ. ಕ್ರೆಡಿಟ್ ಸೊಸೈಟಿಗಳಿಗೂ, ಸೇವಾ ಸಹಕಾರಿ ಸಂಘಗಳಿಗೂ ವ್ಯತ್ಯಾಸವಿದೆ. ಸಹಕಾರಿ ನಿಯಮಾವಳಿ ಪ್ರಕಾರ ನೋಂದಣಿಯಾದ ಸೇವಾ ಸಹಕಾರಿ ಬ್ಯಾಂಕ್‌ಗಳು ಶೇ.5ರಷ್ಟು ಸದಸ್ಯೇತರ ಗ್ರಾಹಕರ ಜತೆ ವ್ಯವಹಾರ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ವಿಶ್ಲೇಷಣೆ ಮಾಡದೆ ಲಾಭಾಂಶದ ಶೇ.30ರಷ್ಟು ಕರ ಪಾವತಿಗೆ ನೀಡಿದ ಸೂಚನೆ, ಭವಿಷ್ಯದಲ್ಲಿ ಸಹಕಾರಿ ಸಂಘಗಳ ಅವನತಿಗೆ ಕಾರಣವಾಗಲಿದೆ ಎನ್ನುವುದು ಹಿರಿಯ ಲೆಕ್ಕಪರಿಶೋಧಕರ ಅಭಿಪ್ರಾಯ.

ನ್ಯಾಯಾಲಯದ ಮೊರೆ: ಅವಿಭಜಿತ ದ.ಕ.ಜಿಲ್ಲೆಯಲ್ಲಿ 700ಕ್ಕೂ ಅಧಿಕ ಸೇವಾ ಸಹಕಾರಿ ಸಂಘಗಳಿವೆ. ಆದಾಯ ತೆರಿಗೆ ಇಲಾಖೆ ಕಂಪ್ಯೂಟರ್ ವ್ಯವಸ್ಥೆಯಡಿ ಸಂಘಗಳು ಗಳಿಸಿದ ಲಾಭಾಂಶ ಪರಿಶೀಲಿಸಿ ನೋಟಿಸ್ ಜಾರಿ ಮಾಡುತ್ತಿದೆ. ಶೇ.25 ಸಂಘಗಳಿಗೆ ನೋಟಿಸ್ ಬಂದಿದೆ. ಈ ಪೈಕಿ ಕೆಲ ಸಂಘಗಳು ಶೇ.20 ಕರ ಪಾವತಿಸಿ, ನ್ಯಾಯಾಲಯದ ಮೊರೆ ಹೋಗಿವೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಸಹಕಾರಿ ಸಂಘಗಳ ಮುಖ್ಯಸ್ಥರ ಸಮಾಲೋಚನಾ ಸಭೆ ನಡೆದು, ಸಾಮೂಹಿಕವಾಗಿ ಕೋರ್ಟ್ ಮೆಟ್ಟಿಲೇರುವ ನಿರ್ಣಯ ಕೈಗೊಳ್ಳಲಾಗಿದೆ.

ಕರಗಲಿದೆ ನಿಧಿ: ಎಷ್ಟು ವರ್ಷದ ಲಾಭಾಂಶದ ಮೇಲೆ ಆದಾಯ ತೆರಿಗೆ ಪಾವತಿ ಎಂಬ ಪ್ರಶ್ನೆಯೂ ಎದುರಾಗಿದೆ. ಕೆಲ ಸಹಕಾರಿ ಸಂಘಗಳಿಗೆ ನೀಡಿದ ನೋಟಿಸ್‌ನಲ್ಲಿ ಎರಡು ವರ್ಷದ ಆದಾಯ ಕರ ಪಾವತಿಸಲು ಸೂಚಿಸಲಾಗಿದೆ. ಪ್ರತಿ ಸಹಕಾರಿ ಬ್ಯಾಂಕ್ ಭವಿಷ್ಯದ ಪ್ರಗತಿಗಾಗಿ ರಿಸರ್ವ್ ಫಂಡ್ ಇರಿಸಿದೆ. ಒಂದೊಮ್ಮೆ, ಕಳೆದ ಹತ್ತು ವರ್ಷಗಳ ಆದಾಯ ಕರ ಪಾವತಿಗೆ ಸೂಚಿಸಿದರೆ ಈ ಫಂಡ್ ಕರಗಲಿದೆ. ಸಹಕಾರಿ ಸಂಘಗಳ ವ್ಯವಹಾರಕ್ಕೆ ತೊಡಕಾದರೆ, ಅದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವುದು ಆರ್ಥಿಕ ತಜ್ಞರ ಲೆಕ್ಕಾಚಾರ.

ಸಹಕಾರಿ ಸಂಘಗಳು ಕೃಷಿ ಪರ ಕಾರ್ಯನಿರ್ವಹಿಸುವ ಕಾರಣ ಆದಾಯ ತೆರಿಗೆ ವಿನಾಯಿತಿ ಪಡೆದಿವೆ. ಈಗ ಇಲಾಖೆ ನೋಟಿಸ್ ನೀಡುತ್ತಿರುವುದು ಆತಂಕ ಸೃಷ್ಟಿಸಿದೆ. ಎಲ್ಲ ಸಹಕಾರಿ ಸಂಘಗಳ ಪರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಕೋರಲಾಗುವುದು. ಆದಾಯ ತೆರಿಗೆ ಇಲಾಖೆಗೂ ಮನವಿ ಸಲ್ಲಿಸಲಾಗುವುದು. ಎಸ್‌ಸಿಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷರಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೂ ಮನವರಿಕೆ ಮಾಡಲಾಗುವುದು.
|ಡಾ.ಎಂ.ಎನ್.ರಾಜೇಂದ್ರಕುಮಾರ್, ಅಧ್ಯಕ್ಷರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್