ನೀರವ್​ ಮೋದಿಯಿಂದ ಆಭರಣ ಖರೀದಿಸಿದ 50 ಶ್ರೀಮಂತರ ಮೇಲೆ ಐಟಿ ಕಣ್ಣು

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೇರಿ ಇತರೆ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ಮತ್ತು ಚಿನ್ನಾಭರಣ ವ್ಯಾಪಾರಿ ನೀರವ್‌ ಮೋದಿಯಿಂದ ಆಭರಣ ಖರೀದಿಸಿದ 50 ಅತಿ ಶ್ರೀಮಂತರ ಮೇಲೆ ಆದಾಯ ತೆರಿಗೆ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ನೀರವ್​ ಮೋದಿಯಿಂದ ದುಬಾರಿ ಬೆಲೆಯ ಆಭರಣಗಳನ್ನು ಖರೀದಿಸುತ್ತಿದ್ದ ಶ್ರಮಂತರು ಅದರ ಬೆಲೆಯ ಸ್ವಲ್ಪ ಭಾಗವನ್ನು ಚೆಕ್​ ಅಥವಾ ಕಾರ್ಡ್​ ಮೂಲಕ ಪಾವತಿಸಿರುವುದು ಮತ್ತು ಉಳಿದ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಪತ್ತೆಯಾಗಿತ್ತು.

ಈ ಸಂಬಂಧ ಆದಾಯ ತೆರಿಗೆ ಇಲಾಖೆ ಆಯ್ದ ಶ್ರೀಮಂತರಿಗೆ ನೋಟಿಸ್​ ನೀಡಿತ್ತು. ಆದರೆ, ಅವರು ತಾವು ನಗದನ್ನು ಪಾವತಿಸಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅವರ ಮೇಲೆ ನಿಗಾ ವಹಿಸಿದ್ದು, ಅವರ ವಹಿವಾಟುಗಳು ಮತ್ತು ಹಣದ ವ್ಯವಹಾರಗಳನ್ನು ಪರಿಶೀಲಿಸುತ್ತಿದೆ ಎಂದು ಐಟಿ ಇಲಾಖೆಯ ಮೂಲಗಳು ತಿಳಿಸಿವೆ.

ಐಟಿ ಇಲಾಖೆ ಇತ್ತೀಚೆಗೆ ಆಮ್​ ಆದ್ಮಿ ಪಾರ್ಟಿಯ ಮಾಜಿ ಮುಖಂಡ ಮತ್ತು ಸ್ವರಾಜ್​ ಇಂಡಿಯಾದ ನಾಯಕ ಯೋಗೇಂದ್ರ ಯಾದವ್​ ಕುಟುಂಬದ ಒಡೆತನದ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಈ ಆಸ್ಪತ್ರೆಯ ಮಾಲೀಕರು ನೀರವ್​ ಮೋದಿಯಿಂದ ಆಭರಣಗಳನ್ನು ಖರೀದಿಸಿದ್ದರು. ಅವರು ಆಭರಣದ ಬೆಲೆಯ ಸ್ವಲ್ಪ ಮೊತ್ತವನ್ನು ಚೆಕ್​ ಮೂಲಕ ಮತ್ತು ಉಳಿದದ್ದನ್ನು ನಗದು ರೂಪದಲ್ಲಿ ಪಾವತಿಸಿತ್ತು ಎಂದು ಐಟಿ ಇಲಾಖೆ ಆರೋಪಿಸಿತ್ತು. (ಏಜೆನ್ಸೀಸ್​)