ವಿಜಯಪುರ ಮೈತ್ರಿ ಅಭ್ಯರ್ಥಿಗೆ ಐಟಿ ಶಾಕ್​: ಸುನಿತಾ ಚವಾಣ್​​ ಸಂಬಂಧಿಕರ ಮನೆ ಮೇಲೆ ದಾಳಿ

ವಿಜಯಪುರ: ವಿಜಯಪುರ ಲೋಕಸಭೆ ಕ್ಷೇತ್ರದ ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಸುನಿತಾ ದೇವಾನಂದ ಚವಾಣ್​​ ಅವರ ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುನಿತಾ ಚವಾಣ್​ ಅವರ ಪತಿ ನಾಗಠಾಣ ಜೆಡಿಎಸ್​ ಶಾಸಕ ದೇವಾನಂದ ಅವರ ಸಂಬಂಧಿ ರಾಮಚಂದ್ರ ದೊಡಮನಿ ಮತ್ತು ಅವರ ಆಪ್ತ ದೇವಪ್ಪ ತದ್ದೇವಾಡಿ ಅವರ ಮನೆ ಮೇಲೆ ದಾಳಿ ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿ ದಾಳಿ ನಡೆದಿದ್ದು, 10 ಅಧಿಕಾರ ತಂಡ ದಾಳಿ ನಡೆಸಿ ದಾಖಲೆ ಪರಿಸೀಲನೆ ನಡೆಸುತ್ತಿದೆ. ದಾಳಿ ವೇಳೆ 12 ಲಕ್ಷ ರೂ. ನಗದು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಸಿಎಂ ಎಚ್​.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಶುಕ್ರವಾರ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದರು. ಅವರು ಇಂದು ಜಿಲ್ಲೆಯಿಂದ ತೆರಳಿದ ತಕ್ಷಣ ಐಟಿ ದಾಳಿ ನಡೆದಿದೆ.

ಐಟಿ ದಾಳಿ ಬಗ್ಗೆ ಮೊದಲೇ ಗೊತ್ತಿತ್ತು

ಐಟಿ ಅಧಿಕಾರಿಗಳು ದಾಳಿ ಮಾಡುವ ಕುರಿತು ಮೊದಲೇ ಗೊತ್ತಿತ್ತು. ಏಕಾಏಕಿ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಯಾವುದೇ ಆಕ್ರಮ ಹಣ ಸಿಕ್ಕಿಲ್ಲ. ಐಟಿ ದಾಳಿ ಮಾಡಿರುವುದು ವಿರೋಧಿಗಳ ಷಡ್ಯಂತ್ರ. ಸೋಲುವ ಭೀತಿಯಿಂದ ಎದುರಾಳಿಗಳು ಚುನಾವಣೆ ದಿಕ್ಕು ತಪ್ಪಿಸಲು ಈ ತಂತ್ರ ಹೆಣೆದಿದ್ದಾರೆ. ಎಂದು ಶಾಸಕ ದೇವಾನಂದ ಚವಾಣ್​ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್​ಗೆ ಐಟಿ ಶಾಕ್

ಬಾಗಲಕೋಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್​ ಆಪ್ತರಾದ ಆರೀಫ್​ ಕಾರ್ಲೆಕರ್​ ಮತ್ತು ಯಾಸೀನ್​ ಮನೆಯ ಮೇಲೆ ಮತ್ತು ಡಿಸಿಸಿ ಬ್ಯಾಂಕ್​ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಇವರಿಬ್ಬರೂ ಬಾಗಲಕೋಟೆ ಡಿಸಿಸಿ ಬ್ಯಾಂಕ್​ನ ನೌಕರರು.