12 ಕೋಟಿ ರೂ. ಆದಾಯ ತೆರಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಲಿದ್ದವ ಮುಂಬೈನಲ್ಲಿ ಅರೆಸ್ಟ್​

ಮುಂಬೈ: ಅಂದಾಜು 12 ಕೋಟಿ ರೂ.ಗೂ ಹೆಚ್ಚು ಆದಾಯ ತೆರಿಗೆ ವಂಚಿಸಿದ್ದಲ್ಲದೆ, ಬೆಂಗಳೂರಿನ ಯಶವಂತಪುರದಲ್ಲಿದ್ದ ಆಸ್ತಿಯನ್ನು ಅಕ್ರಮವಾಗಿ ಬೇರೊಬ್ಬರಿಗೆ ವರ್ಗಾವಣೆ ಮಾಡಿ ವಿದೇಶಕ್ಕೆ ಪರಾರಿಯಾಗಲೆತ್ನಿಸಿದ್ದ ವ್ಯಕ್ತಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದು, ಜೈಲು ಪಾಲಾಗಿದ್ದಾನೆ.

ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಶಾಖೆಯ ತೆರಿಗೆ ವಸೂಲಿ ಅಧಿಕಾರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸಿ, 6 ತಿಂಗಳ ಜೈಲುಶಿಕ್ಷೆಗೆ ಗುರಿಪಡಿಸಿ ಬೆಂಗಳೂರಿನ ಪರಪ್ಪನ ಅಗ್ರಹ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.

ಈ ಪ್ರಕರಣದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತುಂಬಾ ಅಪರೂಪಕ್ಕೊಮ್ಮೆ ತಮಗಿರುವ ಅಧಿಕಾರವನ್ನು ಪರಿಪೂರ್ಣವಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ. ಬಂಧಿತ ವ್ಯಕ್ತಿ ವಿವರಗಳನ್ನು ಬಹಿರಂಗಪಡಿಸಲು ಆದಾಯ ತೆರಿಗೆ ಇಲಖೆ ಅಧಿಕಾರಿಗಳು ನಿರಾಕರಿಸಿದ್ದಾರೆ. ಈತ ಒಟ್ಟು 11.94 ಕೋಟಿ ರೂ. ಆದಾಯ ತೆರಿಗೆ ಮತ್ತು ಬಡ್ಡಿ ಸೇರಿ 12 ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಎಂಬ ಮಾಹಿತಿ ನೀಡಿದ್ದಾರೆ.

ಈ ಬಾಕಿಯನ್ನೂ ಪಾವತಿಸದ ಆ ವ್ಯಕ್ತಿ ಯಶವಂತಪುರದಲ್ಲಿದ್ದ ತನ್ನ ಆಸ್ತಿಯನ್ನು ಅಕ್ರಮವಾಗಿ ಬೇರೊಬ್ಬರಿಗೆ ವರ್ಗಾಯಿಸಿದ್ದ. ಆದಾಯ ತೆರಿಗೆ ಕಾಯ್ದೆಯ 2ನೇ ಷೆಡ್ಯೂಲ್​ನ 73ನೇ ನಿಯಮದ ಪ್ರಕಾರ ತೆರಿಗೆ ಬಾಕಿ ಉಳಿಸಿಕೊಂಡಿರುವ ವ್ಯಕ್ತಿ ತನ್ನ ಆಸ್ತಿಯನ್ನು ಬೇರೊಬ್ಬರಿಗೆ ವರ್ಗಾಯಿಸುವಂತಿಲ್ಲ. ಒಂದು ವೇಳೆ ವರ್ಗಾವಣೆ ಮಾಡಿದ್ದು ಕಂಡುಬಂದಲ್ಲಿ ಇದೇ ಕಾಯ್ದೆಯ 16ನೇ ನಿಯಮದ ಪ್ರಕಾರ ತೆರಿಗೆ ಪಾವತಿಸದಿರುವ ವ್ಯಕ್ತಿ ತೆರಿಗೆ ವಸೂಲಿ ಅಧಿಕಾರಿಯ ಅನುಮತಿ ಪಡೆದು ಆಸ್ತಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಅನುಮತಿ ಪಡೆಯದೆ ಆಸ್ತಿಯನ್ನು ವರ್ಗಾವಣೆ ಮಾಡಿದರೆ ಅದು ಅಕ್ರಮ ಎನಿಸಿಕೊಳ್ಳುತ್ತದೆ. ಆ ವ್ಯಕ್ತಿ ಐಟಿಸಿಪಿ-ಐ ನೋಟಿಸ್​ ನೀಡುವ ಜತೆಗೆ ಆತನನ್ನು ಬಂಧಿಸಿ, ಜೈಲಿಗೆ ಕಳುಹಿಸಬಹುದಾಗಿದೆ. ಐಟಿ ಅಧಿಕಾರಿಗಳು ತುಂಬಾ ಅಪರೂಪವಾಗಿ ಈ ನಿಯಮವನ್ನು ಬಳಸಿ ಬೆಂಗಳೂರು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.