ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾವೂ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಮಂಡ್ಯ: ಒಂದೇ ಕುಟುಂಬದ ನಾಲ್ವರು ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ನೋವಿನಿಂದ ಒದ್ದಾಡುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಮಕ್ಕಳಿಗೂ ವಿಷ ಕುಡಿಸಿ ತಾವು ವಿಷ ಸೇವಿಸಿದ ದಂಪತಿ ಮಕ್ಕಳ ನೋವನ್ನು ನೋಡಲಾಗದೆ ಕಾರಿನಿಂದ ಮಕ್ಕಳನ್ನು ಹೊರದಬ್ಬಿದ್ದಾರೆ. ಮಕ್ಕಳ ಕಿರುಚಾಟ ಕಂಡು ಕಾರಿನ‌ ಬಳಿ ಬಂದ ಪೊಲೀಸ್ ಪೇದೆ ನಂಜುಂಡ ಕೂಡಲೇ ಸ್ಥಳೀಯರ ನೆರವಿನಿಂದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಪೊಲೀಸ್ ತಂಗುದಾಣದ ಎದುರೇ ಬೆಂಗಳೂರಿನಿಂದ ಕಾರಿನಲ್ಲಿ ಬಂದ ಮರೀಗೌಡ, ಪತ್ನಿ ರಜಿನಿ, ಮಕ್ಕಳಾದ ಚಂದ್ರಶೇಖರ್, ಚೇತನ್ ವಿಷ ಸೇವಿಸಿದ್ದರು.

ಮರಿಗೌಡ ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದು, ಸಾಲಬಾಧೆ ತಾಳಲಾರದೆ ಮಕ್ಕಳಿಗೆ ವಿಷ ಕುಡಿಸಿ ತಾವೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯ ಪೊಲೀಸರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)