ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಶ್ಲಾಘನೆ
ವಿಶ್ವ ರೆಡ್ಕ್ರಾಸ್ ದಿನ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಉಡುಪಿ
ರಕ್ತದಾನ, ಪ್ರಥಮ ಚಿಕಿತ್ಸೆಯ ಜತೆಗೆ ಪ್ರಕೃತಿ ವಿಕೋಪ, ಪ್ರವಾಹದಂತಹ ತುರ್ತು ಸಂದರ್ಭಗಳಲ್ಲಿ ರೆಡ್ಕ್ರಾಸ್ ಸಂಸ್ಥೆಯು ಅನನ್ಯ ಸೇವೆ ಸಲ್ಲಿಸುತ್ತಿದೆ. ಸಂಕಷ್ಟಗಳಿಗೆ ಸ್ಪಂದಿಸುವುದೇ ರೆಡ್ಕ್ರಾಸ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ ಗದ್ಯಾಳ ಶ್ಲಾಘಿಸಿದರು.

ಉಡುಪಿ ಬ್ರಹ್ಮಗಿರಿಯಲ್ಲಿರುವ ರೆಡ್ ಕ್ರಾಸ್ ಭವನದ ಜೀನ್ ಹೆನ್ರಿ ಡ್ಯುನಾಂಟ್ ಸಭಾಂಗಣದಲ್ಲಿ ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸೊಸೈಟಿ ವತಿಯಿಂದ ಮೇ 17ರಂದು ಬೆಳಗ್ಗೆ ಆಯೋಜಿಸಿದ್ದ ವಿಶ್ವ ರೆಡ್ಕ್ರಾಸ್ ದಿನ ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸಾಧನ-ಸಲಕರಣೆ ವಿತರಿಸಿ ಮಾತನಾಡಿದರು.
ಮಾನವೀಯ ಸೇವೆ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಜಗತ್ತಿನಲ್ಲಿ ಮಾನವೀಯ ಸೇವೆ ಸಲ್ಲಿಸಿದ ಅತಿದೊಡ್ಡ ಸಂಸ್ಥೆ ಎಂಬ ಹೆಗ್ಗಳಿಕೆ ರೆಡ್ಕ್ರಾಸ್ ಸಂಸ್ಥೆಗಿದೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ನೀಡುತ್ತಿದ್ದು, ಸಂಸ್ಥೆಯಿಂದ ದೊರಕುವ ಸೇವೆ-ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಉಪನ್ಯಾಸ, ಸನ್ಮಾನ
ಡಾ. ಜಿ.ಶಂಕರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ಕ್ರಾಸ್ ಸಂಯೋಜಕಿ ಡಾ. ದಿವ್ಯಾ ಎಂ.ಎಸ್., ಭಾರತೀಯ ರೆಡ್ಕ್ರಾಸ್ನ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಿತ್ಯಾನಂದ ಒಳಕಾಡು, ನಿರುಪಮಾ ಪ್ರಸಾದ ಮತ್ತು ಭಾರತಿ ಅವರನ್ನು ಸನ್ಮಾನಿಸಲಾಯಿತು. 15 ಫಲಾನುಭವಿಗಳಿಗೆ ಗಾಲಿಕುರ್ಚಿ, ತಲಾ 10 ಫಲಾನುಭವಿಗಳಿಗೆ ಶ್ರವಣ ಸಾಧನ, ಗೃಹಪಯೋಗಿ ವಸ್ತು ಹಾಗೂ ವಿವಿಧ ಶಾಲಾ-ಕಾಲೇಜುಗಳಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಲಾಯಿತು.
ಜಿಲ್ಲಾ ರೆಡ್ಕ್ರಾಸ್ ಸಂಸ್ಥೆಯ ಉಪಸಭಾಪತಿ ಅಶೋಕ ವೈ.ಜಿ., ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ, ನಿಕಟಪೂರ್ವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಸದಸ್ಯ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರು. ಗೌರವ ಖಜಾಂಚಿ ರಮಾದೇವಿ ವಂದಿಸಿದರು.
ಜಗತ್ತಿನಲ್ಲಿ ಶಾಂತಿ ಕಾಪಾಡುವಲ್ಲಿ ರೆಡ್ಕ್ರಾಸ್ ಕೊಡುಗೆ ಸ್ಮರಣೀಯ. ಕಷ್ಟದಲ್ಲಿರುವವರಿಗೆ ನ್ಯಾಯಯುತ ಸಹಾಯ ಮಾಡುವ ಕೆಲಸ ಮಾಡುತ್ತಲೇ ಇದೆ. ಶಾಂತಿ ಮತ್ತು ಮಾನವೀಯ ಮೌಲ್ಯಕ್ಕೆ ಪ್ರತಿಯೊಬ್ಬರ ಒಲವಿರಬೇಕು. ಒಳ್ಳೆಯ ಯೋಚನೆಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆ ತರಲು ಸಾಧ್ಯ.
| ಅಬೀದ ಗದ್ಯಾಳ. ಅಪರ ಜಿಲ್ಲಾಧಿಕಾರಿ.