More

    ಓಂಕಾರೇಶ್ವರದಲ್ಲಿ ಏಕಾತ್ಮತಾ ಪ್ರತಿಮೆ

    ಎಂಟನೇ ಶತಮಾನದ ಹಿಂದು ತತ್ವಜ್ಞಾನಿ ಮತ್ತು ಸಂತ ಆದಿಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಸೆಪ್ಟೆಂಬರ್ 21 ದೇವಾಲಯದ ನಗರಿ ಓಂಕಾರೇಶ್ವರದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅನಾವರಣಗೊಳಿಸಿದ್ದಾರೆ. ಸುಪ್ರಸಿದ್ಧ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಓಂಕಾರೇಶ್ವರ ಈ ನಗರದಲ್ಲಿಯೇ ಇದೆ. ಏಕಾತ್ಮತಾ ಕಿ ಪ್ರತಿಮಾ ಅಥವಾ ಏಕತ್ವದ ಪ್ರತಿಮೆ ಎಂದು ಹೆಸರಿಸಲಾದ ಈ ಪ್ರತಿಮೆಯು ಆದಿ ಶಂಕರಾಚಾರ್ಯರ ಪರಂಪರೆ ಮತ್ತು ಆಳವಾದ ಬೋಧನೆಗಳನ್ನು ಬಿಂಬಿಸುವ ಸ್ಮಾರಕವಾಗಿದೆ. ಖಾಂಡ್ವಾ ಜಿಲ್ಲೆಯ ನರ್ಮದಾ ನದಿ ತೀರದ ಸುಂದರವಾದ ಮಂಧಾತ ಬೆಟ್ಟದ ಮೇಲಿರುವ ಈ ಬೃಹತ್ ಮೂರ್ತಿಯನ್ನು ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್ ಮತ್ತು ಮಧ್ಯಪ್ರದೇಶ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಲ್ಪನೆಯ ಮೂಸೆಯಲ್ಲಿ ನಿರ್ವಿುಸಲಾಗಿದೆ. ಆದಿ ಶಂಕರಾಚಾರ್ಯರ ಜೀವನ, ತತ್ತ್ವಶಾಸ್ತ್ರ ಹಾಗೂ ಅದರ ಮಹತ್ವವನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಹಿಂದು ಧರ್ಮದ ವೇದಾಂತ ಶಾಲೆಯ ಮೂಲಭೂತ ಪಠ್ಯ ಎಂದೇ ಪರಿಗಣಿತವಾಗಿರುವ ಶಂಕರಾಚಾರ್ಯರು ರಚಿಸಿದ ’ಬ್ರಹ್ಮಸೂತ್ರಭಾಷ್ಯ’ದ ವ್ಯಾಖ್ಯಾನದಲಿರುವ ಏಕತೆಯ ಪರಿಕಲ್ಪನೆಯನ್ನು ಇಲ್ಲಿ ಒತ್ತಿಹೇಳಲಾಗಿದೆ. ‘ಆದಿ ಶಂಕರಾಚಾರ್ಯರ ಜೀವನ ಮತ್ತು ತತ್ತ್ವಶಾಸ್ತ್ರವನ್ನು ಗೌರವಿಸುವ ಪರಿಕಲ್ಪನೆಯ ಈ ಅಸಾಧಾರಣ ನಿರ್ವಣವು ಮಹಾನ್ ಸಂತ ಶಂಕರಾಚಾರ್ಯರ ಅದ್ಭುತ ವ್ಯಾಖ್ಯಾನವಾದ ಬ್ರಹ್ಮಸೂತ್ರಭಾಷ್ಯ ಕುರಿತ ಗೌರವದ ಪ್ರತೀಕವಾಗಿದೆ’ ಎಂದು ವರ್ಣಿಸುತ್ತಾರೆ ಈ ಸಾಂಸ್ಕೃತಿಕ ಯೋಜನೆಯ ಹಿಂದಿನ ದಾರ್ಶನಿಕರಾಗಿರುವ ಸಿಪಿ ಕುಕ್ರೇಜಾ ಆರ್ಕಿಟೆಕ್ಟ್​ನ ಹಿರಿಯ ಅಧಿಕಾರಿ ದಿಕ್ಷು ಕುಕ್ರೇಜಾ.

    ಈ ಸಾಂಸ್ಕೃತಿಕ ಯೋಜನೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಮೂಲ್ಯ ದೃಷ್ಟಿಕೋನವಾಗಿರುವ ’ವಸುದೈವ ಕುಟುಂಬಕಂ (ಜಗತ್ತು ಒಂದು ಕುಟುಂಬ)’ ಕಲ್ಪನೆಯನ್ನು ಕೂಡ ಪ್ರತಿಬಿಂಬಿಸುತ್ತದೆ. ಈ 108 ಅಡಿ ಎತ್ತರದ ಪ್ರತಿಮೆಯೊಂದಿಗೆ, ಮಧ್ಯಪ್ರದೇಶವು ಎಲ್ಲಾ ಧರ್ಮಗಳಿಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತದೆ ಎಂದೂ ಅವರು ಹೇಳುತ್ತಾರೆ.

    75 ಅಡಿ ವೇದಿಕೆ ಮೇಲೆ ಸ್ಥಾಪನೆ: 100 ಟನ್ ತೂಕದ ಈ ಪ್ರತಿಮೆಯನ್ನು ಭಾರತೀಯ ಕಲಾವಿದರು, ಶಿಲ್ಪಿ ಮತ್ತು ಇಂಜಿನಿಯರ್​ಗಳು ರಚಿಸಿದ್ದಾರೆ. ಲೋಹದ ಎರಕವನ್ನು ಚೀನಾದ ನಾನ್​ಚಾಂಗ್ ನಗರದಲ್ಲಿ ಮಾಡಲಾಗಿದ್ದು, ಹಲವಾರು ಬ್ಯಾಚ್​ಗಳಲ್ಲಿ ಮುಂಬೈಗೆ ರವಾನಿಸಲಾಯಿತು. 75 ಅಡಿ ವೇದಿಕೆಯ ಮೇಲೆ ಸ್ಥಾಪಿಸಲಾದ ಈ ವಿಗ್ರಹವು ಶೇಕಡಾ 88ರಷ್ಟು ತಾಮ್ರ, ಶೇಕಡಾ 4ರಷ್ಟು ಸತು ಮತ್ತು ಶೇಕಡಾ 8ರಷ್ಟು ತವರ ಒಳಗೊಂಡಿರುವ ಲೋಹದಿಂದ ಮಾಡಲ್ಪಟ್ಟಿದೆ. ಇದರ ಆಂತರಿಕ ರಚನೆಯು ಉತ್ತಮ ಗುಣಮಟ್ಟದ ಉಕ್ಕಿನಿಂದ ಮಾಡಲ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2,141 ಕೋಟಿ ರೂ. ಯೋಜನೆ: ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಈ ಹಿಂದೆಯೇ ಓಂಕಾರೇಶ್ವರದಲ್ಲಿ ಮ್ಯೂಸಿಯಂ ಜತೆಗೆ ಆದಿ ಶಂಕರಾಚಾರ್ಯರ ಪ್ರತಿಮೆಯ ನಿರ್ವಣವನ್ನು ಒಳಗೊಂಡಿರುವ 2,141.85 ಕೋಟಿ ರೂಪಾಯಿಗಳ ಯೋಜನೆಗೆ 2018ರಲ್ಲಿಯೇ ಅನುಮೋದನೆ ನೀಡಿತ್ತು. ಶೋಲಾಪುರದ ಕಲಾವಿದ ವಾಸುದೇವ್ ಕಾಮತ್ ಅವರು ಪ್ರತಿಮೆಯ ವಿನ್ಯಾಸವನ್ನು ಮಾಡಿದ್ದಾರೆ. ರಾಜಾ ರವಿವರ್ವ ಅವರ ಶಂಕರಾಚಾರ್ಯರ ಚಿತ್ರದಿಂದ ಸ್ಪೂರ್ತಿ ಪಡೆದಿದ್ದಾರೆ. ಕಾಮತ್ ಅವರು ಆರಂಭಿಕ ಭಾವಚಿತ್ರವನ್ನು ರಚಿಸಿದಾಗ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ 2018ರಲ್ಲಿ ಚಾಲನೆ ದೊರೆಯಿತು. ತರುವಾಯ, ಏಕಾತ್ಮ ಯಾತ್ರಾ ಎಂಬ ಬೃಹತ್ ಸಾರ್ವಜನಿಕ ರ‍್ಯಾಲಿ ಮತ್ತು ಮೆರವಣಿಗೆಗಳು ಮಧ್ಯಪ್ರದೇಶ ರಾಜ್ಯದೆಲ್ಲೆಡೆ ಅಂದಾಜು 23 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಜರುಗಿದವು. ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಪ್ರತಿಮೆಗಾಗಿ ಲೋಹವನ್ನು ಸಂಗ್ರಹಿಸಲಾಯಿತು.

    ಸಾಂಸ್ಕೃತಿಕ ದೋಣಿ ವಿಹಾರ: ಇಲ್ಲಿಯೇ ವಸ್ತುಸಂಗ್ರಹಾಲಯವಿದ್ದು 3ಡಿ ಹೊಲೊಗ್ರಾಮ್ ಪೊ›ಜೆಕ್ಷನ್ ಗ್ಯಾಲರಿ, ಒಂಬತ್ತು ಪ್ರದರ್ಶನ ಗ್ಯಾಲರಿಗಳು, ಒಳಾಂಗಣದ ವೈಡ್-ಸ್ಕ್ರೀನ್ ಥಿಯೇಟರ್ ಮತ್ತು ಅದ್ವೈತ ನರ್ಮದಾ ವಿಹಾರ್ ಎಂಬ ಸಾಂಸ್ಕೃತಿಕ ದೋಣಿ ವಿಹಾರವನ್ನು ಒಳಗೊಂಡಿದೆ, ಈ ದೋಣಿ ವಿಹಾರವು ಶಂಕರಾಚಾರ್ಯರ ಬೋಧನೆಗಳ ಮೂಲಕ ಶ್ರವ್ಯ-ದೃಶ್ಯ ಪ್ರಯಾಣದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

    ಆದಿ ಶಂಕರಾಚಾರ್ಯರ ಬಾಲ ರೂಪವನ್ನು ಯಾರೂ ನೋಡಿಲ್ಲ. 20-22 ವರ್ಷದ ಯುವಕನಂತೆ ಚಿತ್ರಿಸಿದ ರಾಜಾ ರವಿ ವರ್ವ ಅವರ ಚಿತ್ರ ಮಾತ್ರ ನಮ್ಮಲ್ಲಿತ್ತು. ಈ ಮೂರ್ತಿಗಾಗಿ ನನ್ನ ಪೇಂಟಿಂಗ್ ಮಾಡುವಾಗ ನಾನು 11-12 ವರ್ಷದ ಕೇರಳದ ಹುಡುಗರ ಮುಖ, ಅವರ ಮುಖದ ರಚನೆ ಮತ್ತು ಇತರ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಿದ್ದೇನೆ.

    | ವಾಸುದೇವ್ ಕಾಮತ್, ಕಲಾವಿದ

    ಕಲಾವಿದರ ಶ್ರಮ: ಕಲಾವಿದ ವಾಸುದೇವ್ ಕಾಮತ್ ಅವರು ಈ ಮೂರ್ತಿಗೆ ಅಂತಿಮ ರೂಪ ನೀಡಲು ಸಾಕಷ್ಟು ಶ್ರಮಿಸಿದ್ದಾರೆ. ಕೇರಳದ ಕಾಲಡಿಯಲ್ಲಿರುವ ಶಂಕರಾಚಾರ್ಯರ ಜನ್ಮಸ್ಥಳಕ್ಕೂ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಆ ಯುಗದಲ್ಲಿ ಪುರುಷರ ಉಡುಪು ಶೈಲಿ, ನದಿಗಳು, ಮನೆಗಳು, ಅವರ ವಾಸ್ತುಶಿಲ್ಪದ ವಿನ್ಯಾಸವನ್ನು ಅಧ್ಯಯನ ಮಾಡಿದ್ದಾರೆ. ಕಾಮತ್ ಅವರ ಶಂಕರಾಚಾರ್ಯ ಚಿತ್ರಕ್ಕೆ 2018ರಲ್ಲಿ ಹಸಿರು ನಿಶಾನೆ ದೊರೆತ ನಂತರ, ಸ್ಪರ್ಧೆಯೊಂದನ್ನು ಘೊಷಿಸಲಾಯಿತು. ಇದರಲ್ಲಿ ವಿವಿಧ ರಾಜ್ಯಗಳ 20 ಶಿಲ್ಪಿಗಳು ಭಾಗವಹಿಸಿದ್ದರು. ನಂತರ ಈ ಯೋಜನೆಗೆ ಶಿಲ್ಪಿ ಭಗವಾನ್ ರಾಂಪುರೆ ಅವರನ್ನು ಆಯ್ಕೆ ಮಾಡಲಾಯಿತು. ರಾಂಪುರೆ ಮೊದಲು 3.5 ಅಡಿ ಎತ್ತರದ ಮಾದರಿಯನ್ನು ತಯಾರಿಸಿ, ವಿನ್ಯಾಸಗಳನ್ನು ಅಂತಿಮಗೊಳಿಸಿದ ನಂತರ ಅದನ್ನು 11 ಅಡಿಗೆ ವಿಸ್ತರಿಸಿದರು. ಲೋಹದ ಎರಕದ ಕೆಲಸಕ್ಕಾಗಿ ನಾನ್​ಚಾಂಗ್ ನಗರಕ್ಕೆ ತೆರಳಿದರು. ‘ಮೆಟಲ್ ಎರಕಹೊಯ್ದ ಕೆಲಸಗಳಿಗಾಗಿ ನನ್ನ ಬಳಿ ಅಂತಹ ದೊಡ್ಡ ಫೌಂಡ್ರಿ ಇರಲಿಲ್ಲ, ಬಳಸಿದ ವಸ್ತುವು ಜೀವಿತಾವಧಿಯ ಬಾಳಿಕೆ ಹೊಂದಿರಬೇಕಾಗುತ್ತದೆ. ನಾನ್​ಚಾಂಗ್ ಪ್ರಭಾವಶಾಲಿ ಸೌಲಭ್ಯವನ್ನು ಹೊಂದಿದೆ. ಈ ಯೋಜನೆಗಾಗಿ ನಾನು 100 ಚೀನೀ ಕಾರ್ವಿುಕರನ್ನು ಬಳಸಿಕೊಂಡಿದ್ದೇನೆ’ ಎಂದು ರಾಂಪುರೆ ವಿವರಿಸುತ್ತಾರೆ.

    ಪಂಚಾಯಿತಿಗೊಂದು ಮದ್ಯದಂಗಡಿ ತೆರೆಯಲು ಸರ್ಕಾರದ ಚಿಂತನೆ: ಇದನ್ನು ವಿರೋಧಿಸಿ ನೂರಾರು ಮಹಿಳೆಯರ ಅಹೋರಾತ್ರಿ ಪ್ರತಿಭಟನೆ

    ಸೂಪರ್​ ಮಾರ್ಕೆಟ್​ನಲ್ಲಿ ಫ್ರಿಡ್ಜ್ ಡೋರ್ ತೆರೆಯುತ್ತಿದ್ದಂತೆ ಶಾಕ್​; ನಾಲ್ಕು ವರ್ಷದ ಬಾಲಕಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts