ಯಲಬುರ್ಗಾ: ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕು ಎನ್ನುವ ಕಾರಣಕ್ಕೆ ಕ್ಷೇತ್ರದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೂತನ ಪ್ರಯೋಗಾಲಯ ಹಾಗೂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದರು.
ಹಿರೇವಂಕಲಕುಂಟಾ ಗ್ರಾಮಕ್ಕೆ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಮತ್ತು ಗುನ್ನಾಳ ಗ್ರಾಮಕ್ಕೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಮಂಜೂರು ಮಾಡಿಸಲು ಶ್ರಮಿಸಲಾಗುವುದು. ಅಂದಾಜು 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೆಕೆಆರ್‌ಡಿಬಿಯಿಂದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರಾರಂಭಿಸಲಾಗಿದೆ. ನರೇಗಾದಡಿ ಕಾಂಪೌಂಡ್ ನಿರ್ಮಿಸಿಕೊಳ್ಳಬೇಕು. ಸರ್ಕಾರದಿಂದ ನೂರಾರು ಕೋಟಿ ರೂ. ಖರ್ಚು ಮಾಡಿ ಅನೇಕ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ವಹಣೆ ಕೊರತೆ ಕಾಡುತ್ತಿದೆ ಎಂದರು.
ಬಿಸಿಎಂ ಇಲಾಖೆ ಜಿಲ್ಲಾಧಿಕಾರಿ ನಾಗಮಣಿ, ತಾಲೂಕು ಅಧಿಕಾರಿ ಶಿವಶಂಕರ ಕರಡಕಲ್, ವಿಭಾಗೀಯ ತಾಂತ್ರಿಕ ಅಧಿಕಾರಿ ಚಂದ್ರಶೇಖರ, ಪ್ರಮುಖರಾದ ರಾಘವೇಂದ್ರಾಚಾರ್ ಜೋಶಿ, ಡಾ.ಶಿವನಗೌಡ ದಾನರಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ರುದ್ರಪ್ಪ ಮರಕಟ್, ಆದೇಶ ರೊಟ್ಟಿ, ನಾಗರಾಜ ನವಲಹಳ್ಳಿ, ಬಸವರಾಜ ಹಿರೇಮನಿ, ಮಂಜುನಾಥ ಸಜ್ಜನ್ ಇತರರಿದ್ದರು.
ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬೇಡಿ
ಯಲಬುರ್ಗಾ: ಇತ್ತೀಚಿನ ರಾಜಕೀಯ ವ್ಯವಸ್ಥೆ ಭ್ರಷ್ಟಾಚಾರದಿಂದ ಕೂಡಿದೆ. ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ನಡೆಯುತ್ತಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಮದ್ಲೂರು-ಲಗಳೂರು ಹಳ್ಳಕ್ಕೆ 3.30 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ.ಬ್ಯಾರೇಜ್ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ 13 ಕಡೆ ನೂರಾರು ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ.ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಗುಣಮಟ್ಟದಿಂದ ಮಾಡಿಸಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ. ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ಅನುದಾನ ಕೊರತೆ ಇಲ್ಲ. ಬಿಜೆಪಿಯವರ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದರು.
ಗೆದಗೇರಿ ಗ್ರಾಪಂ ಅಧ್ಯಕ್ಷ ಶರಣಪ್ಪ ಕೊಪ್ಪದ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಪ್ರಕಾಶ ಪಾಟೀಲ್, ಪ್ರಮುಖರಾದ ಯಂಕಣ್ಣ ಯರಾಶಿ, ರೇವಣಪ್ಪ ಸಂಗಟಿ, ಹನುಮಂತಗೌಡ ಪಾಟೀಲ್, ರಾಮಣ್ಣ ಸಾಲಭಾವಿ, ಸಂಗಣ್ಣ ತೆಂಗಿನಕಾಯಿ, ಆನಂದ ಉಳ್ಳಾಗಡ್ಡಿ, ಡಾ.ಶಿವನಗೌಡ ದಾನರಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ತಿರುಪತಿ ಬಸರಿಗಿಡದ, ಬಾಲನಗೌಡ ಸಣ್ಣಗೌಡ್ರ, ನಾಗರಾಜ ನಾಯ್ಕ, ಹನುಮಂತ ಭಜಂತ್ರಿ, ಹುಲಗಪ್ಪ ಬಂಡಿವಡ್ಡರ್ ಇತರರು ಇದ್ದರು.