ಔರಾದ್: ಎರಡು ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲೂಕಿನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ದಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.
ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಒಳಾಂಗಣ ಕ್ರೀಡಾಂಗಣವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿ, ಈ ಭಾಗದ ಮಕ್ಕಳು ಆಟದಲ್ಲಿಯೂ ಮುಂದಿರಬೇಕು ಎಂಬ ಉದ್ದೇಶದಿಂದ ಒಳ್ಳೆಯ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಒಳಾಂಗಣ ಕ್ರೀಡಾಂಗಣವೂ ನಿರ್ಮಿಸಬೇಕೆಂಬುದು ಬಹಳಷ್ಟು ದಿನಗಳ ಬೇಡಿಕೆಯಾಗಿತ್ತು. ಅದರಂತೆ ೨ ಕೋಟಿ ರೂ.ಗೂ ಹೆಚ್ಚು ಮೊತ್ತದಲ್ಲಿ ಉತ್ತಮ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಜಿಮ್ ಮಾಡಲು ಅವಶ್ಯಕ ಸಾಮಗ್ರಿಗಳನ್ನು ಒದಗಿಸಲಾಗಿದೆ. ಬ್ಯಾಡ್ಮಿಂಟನ್ ಸೇರಿದಂತೆ ಎಲ್ಲ ರೀತಿಯ ಒಳಾಂಗಣ ಕ್ರೀಡೆಗಳನ್ನು ಆಡಬಹುದು. ಯುವಜನತೆ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಔರಾದ್‌ನಲ್ಲಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಬೇಕಿರುವ ಎಲ್ಲ ಅವಶ್ಯಕತೆಗಳನ್ನು ಪೂರೈಸಲು ಸಿದ್ಧನಿದ್ದೇನೆ. ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ನನ್ನ ಕ್ಷೇತ್ರ ರಾಜ್ಯದ ಜನತೆ ಗುರುತಿಸುವ ರೀತಿಯಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು.
ಕ್ರೀಡಾ ಅಧಿಕಾರಿ ಶಿವಾಜಿ ಬೆಂಜರವಾಡಾ ಅವರು ಕ್ರೀಡಾಂಗಣದ ಅಭಿವೃದ್ಧಿ ಕುರಿತು ವಿವಿಧ ಬೇಡಿಕೆಗಳನ್ನು ಶಾಸಕರಿಗೆ ಸಲ್ಲಿಸಿದರು. ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಎಪಿಎಂಸಿ ಅಧ್ಯಕ್ಷ ದೊಂಡಿಬಾ ನರೋಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಸಿಪಿಐ ರಘುವೀರಸಿಂಗ್ ಠಾಕೂರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ, ಮುಖಂಡರಾದ ಶಿವಾಜಿರಾವ ಪಾಟೀಲ್ ಮುಂಗನಾಳ, ಶಿವರಾಜ ಅಲ್ಮಾಜೆ ಮತ್ತಿತರು ಇದ್ದರು.