
ಅರಕಲಗೂಡು: ತಾಲೂಕಿನ ಗೊಬ್ಬಳಿ ಕಾವಲು ಗ್ರಾಮದಲ್ಲಿ ಶ್ರೀ ಚೌಡೇಶ್ವರಿ, ಶ್ರೀ ಅಂಜನೇಯಸ್ವಾಮಿ, ಶ್ರೀ ಕಾಲಭೈರವೇಶ್ವರ ಹಾಗೂ ಶ್ರೀ ರಾಮೇಶ್ವರಸ್ವಾಮಿ ದೇವಾಲಯಗಳು ಸೋಮವಾರ ಲೋಕಾರ್ಪಣೆಗೊಂಡವು.
ಗೊರೂರು ಹೇಮಾವತಿ ಜಲಾಶಯಕ್ಕಾಗಿ ಮುಳುಗಡೆಯಾದ ನಿರಾಶ್ರಿತರಿಗೆ ಮರು ವಸತಿ ಸೌಲಭ್ಯ ಕಲ್ಪಿಸಿರುವ ಗೊಬ್ಬಳಿ ಕಾವಲು ಗ್ರಾಮದಲ್ಲಿ ಹೊಸದಾಗಿ ಜೀರ್ಣೋದ್ಧಾರವಾದ ದೇವಾಲಯಗಳ ಉದ್ಘಾಟನೆ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ದೇಗುಲಗಳ ಉದ್ಘಾಟನೆ ಅಂಗವಾಗಿ ವಿವಿಧ ಪೂಜಾ ವಿಧಾನಗಳು ವಿಧಿವತ್ತಾಗಿ ನಡೆದವು. ಚೌಡೇಶ್ವರಿ ದೇವಿಗೆ ಅಭಿಷೇಕ, ಗೋಪುರ ಕಳಸ ಪ್ರತಿಷ್ಠಾಪಿಸಲಾಯಿತು. ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಪ್ರಾಣಪ್ರತಿಷ್ಠಾಪನೆ ಪೂಜೆ ಸಲ್ಲಿಸಲಾಯಿತು. ಕಾಲಭೈರವೇಶ್ವರ ದೇವಸ್ಥಾನದಲ್ಲಿ ಪ್ರಾಣಪ್ರತಿಷ್ಠಾಪನೆ, ಪ್ರಧಾನ ಹೋಮ, ಕುಂಭಾಭಿಷೇಕ, ಹಸು ಕರು, ದರ್ಪಣ ದರ್ಶನ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ಶ್ರೀ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಹೋಮ ಹವನ, ಗೋಪುರ ಕಳಸ, ವಿಗ್ರಹ ಪ್ರತಿಷ್ಠಾಪನೆ, ವಿವಿಧ ಪೂಜಾ ಕೈಂಕರ್ಯಗಳು ಸಾಂಗವಾಗಿ ನೆರವೇರಿದವು. ಅಪಾರ ಭಕ್ತರು ಸರದಿ ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಪುನೀತರಾದರು.
ಪುರೋಹಿತರಾದ ರುದ್ರಮೂರ್ತಿ, ಚಂದ್ರಶೇಖರ್, ರವಿಪ್ರಕಾಶ್, ಲೋಹಿತ್, ಅಲೋಕ್, ಸುಗುಣಶಾಸ್ತ್ರಿ, ಅರುಣ್ ಶಾಸ್ತ್ರಿ, ಅರ್ಚಕರಾದ ನಿಂಗಪ್ಪ, ಮಧುಸೂಧನ್ ಅವರ ಸಮ್ಮುಖದಲ್ಲಿ ಪೂಜಾ ವಿಧಾನಗಳನ್ನು ಪೂರೈಸಲಾಯಿತು. ಭಕ್ತರಿಗೆ ಅನ್ನದಾಸೋಹ ನಡೆಯಿತು. ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಂ.ಟಿ. ಕೃಷ್ಣೇಗೌಡ, ಉದ್ಯಮಿ ಸಿ.ಕೆ. ಮೂರ್ತಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.