ವಿಜಯಪುರ: ನಗರದ ಬಿಎಲ್ಡಿಇ ಡೀಮ್ಡ್ ವಿಶ್ವ ವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಪ್ರಾರಂಭಿಸಲಾಗಿರುವ ಶ್ರವಣ ಶಾಸ್ತ್ರ ಮತ್ತು ಮಾತು ಕಲಿಕೆ ಕೇಂದ್ರವನ್ನು ವಿವಿ ಕುಲಪತಿ ಡಾ. ಆರ್.ಎಸ್. ಮುಧೋಳ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಮೆರಿಕಾ ಮೂಲದ ಕಂಪನಿಯಿಂದ ರೂ. 13 ಲಕ್ಷ ವೆಚ್ಚದ ವಿಶ್ವ ದರ್ಜೆಯ ಅತ್ಯಾಧುನಿಕ ಯಂತ್ರ ಬೇರಾ ವಿಶೇಷ ಮಿದುಳು ಬಳ್ಳಿಯ ನರಗಳ ಶ್ರವಣ ಪರೀಕ್ಷಾ ಯಂತ್ರವನ್ನು ಖರೀದಿಸಲಾಗಿದ್ದು, ಇದರಿಂದ ನವಜಾತ ಶಿಶುಗಳ ಕಿವುಡುತನ ತಪಾಸಣೆಗೆ ನೇರವಾಗಲಿದೆ ಎಂದು ಹೇಳಿದರು.
ಈ ವಿಶೇಷ ಯಂತ್ರಗಳ ಮೂಲಕ ಹುಟ್ಟಿನಿಂದ ಕಿವುಡುತನ, ಕಿವಿಯ ಸೋಂಕಿನಿಂದ ನರದೌರ್ಬಲ್ಯ, ಹಿರಿಯ ನಾಗರಿಕರಲ್ಲಿ ಕಾಯಿಲೆಗಳಿಂದ ಉಂಟಾಗುವ ಕಿವುಡುತನ ತಪಾಸಣೆಗೆ ಸಹಾಯಕವಾಗಲಿದೆ. ಮುಂಬರುವ ದಿನಗಳಲ್ಲಿ ಹುಟ್ಟಿನಿಂದ ಇರುವ ಕಿವುಡುತನದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಕಾಂಕ್ಲಿಯರ ಇಂಪ್ಲಾಂಟ್ ಯೋಜನೆಯನ್ನು ಪ್ರಾರಂಭಿಸಲಾಗುವುದು. ವಿಮಾ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಬದುಕಲು ಅವರಿಗೆ ಅವಕಾಶ ಮಾಡಿಕೊಡುತ್ತದೆ. ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ. ಆರ್.ಎನ್. ಕರಡಿ, ಪ್ರಾಧ್ಯಾಪಕ ಡಾ.ಎಚ್.ಟಿ. ಲತಾದೇವಿ, ಡಾ. ಶಶಿಕುಮಾರ, ಡಾ. ಶಿವಶಂಕರ ಆಚಾರ, ಡಾ. ಮೇನಾಲಿ, ಡಾ. ಸುನಿತಾ, ಡಾ. ಶರಣಬಸು ಮತ್ತಿತರರಿದ್ದರು.