More

    ಆಲದಕಟ್ಟಿಯಲ್ಲಿ ಅಸಮರ್ಪಕ ಟೋಲ್ ಸಂಗ್ರಹ

    ವಿಜಯವಾಣಿ ವಿಶೇಷ ಹಾವೇರಿ

    ‘ಇಲ್ಲಿ ಎಲ್ಲ ವಾಹನಗಳನ್ನೂ ನಿಲ್ಲಿಸಿ ಶುಲ್ಕ ಸಂಗ್ರಹಿಸುತ್ತಾರೆ. ಹಾಗಂತ ಇವರಲ್ಲಿ ಸರ್ಕಾರದ ಯಾವುದೇ ಅಧಿಕೃತ ಅನುಮತಿ ಪತ್ರವಿಲ್ಲ. ಇವರು ನೀಡುವ ರಸೀದಿಯಲ್ಲಿ ವಾಹನದ ನಂಬರ್ ಕೂಡ ನಮೂದಾಗುವುದಿಲ್ಲ. ಬಸ್​ನಲ್ಲಿ ನಿರ್ವಾಹಕ ಕೊಡುವ ಟಿಕೆಟ್ ರೀತಿ ರಸೀದಿ ನೀಡುತ್ತಾರೆ.’

    ಇದು ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ಹಾವೇರಿ-ಹಾನಗಲ್ಲ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಿರ್ವಿುಸಿರುವ ಟೋಲ್​ಪ್ಲಾಜಾದಲ್ಲಿನ ಸದ್ಯದ ಸ್ಥಿತಿ…

    ಇಲ್ಲಿನ ಟೋಲ್​ಪ್ಲಾಜಾದಲ್ಲಿ ಟೋಲ್ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.

    2019ರ ಫೆಬ್ರವರಿ 23ರಿಂದ ಇಲ್ಲಿ ಟೋಲ್ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಆರ್​ಡಿಸಿಎಲ್) ಮೈಸೂರಿನ ಮಿತ್ರಾ ಇನ್ಪ್ರಾ ಸೆಲ್ಯುಶನ್ಸ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಇವರು 8 ತಿಂಗಳುಗಳ ಕಾಲ ಟೋಲ್ ಸಂಗ್ರಹಿಸಿದ್ದರು. ನಂತರ ಅವರು ಸರ್ಕಾರಕ್ಕೆ ತುಂಬಬೇಕಾದ ಹಣವನ್ನು ಸಕಾಲದಲ್ಲಿ ತುಂಬದ ಕಾರಣ ಕಳೆದ ನವೆಂಬರ್​ನಲ್ಲಿ ಅವರನ್ನು ಟೋಲ್ ಸಂಗ್ರಹದಿಂದ ವಿಮುಕ್ತಿಗೊಳಿಸಲಾಗಿತ್ತು. ನಂತರ ಮರು ಟೆಂಡರ್ ಕರೆಯುವವರೆಗೆ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಚಿತ್ರದುರ್ಗ ಮೂಲದ ತಿಪ್ಪಣ್ಣ ಎಂಬುವರಿಗೆ ಕೆಆರ್​ಡಿಸಿಎಲ್ ಪರವಾನಗಿ ನೀಡಿದೆ. ಆದರೆ, ಅವರು ವಾಹನಗಳಿಂದ ಪಡೆಯುವ ಮೊತ್ತಕ್ಕೆ ಕಂಪ್ಯೂಟರೀಕೃತ ರಸೀದಿ ನೀಡುತ್ತಿಲ್ಲ. ಬಸ್ ಕಂಡಕ್ಟರ್ ಟಿಕೆಟ್ ನೀಡುವ ಇಟಿಎಂ ಮಶೀನ್​ನಲ್ಲಿಯೇ ಕೆಆರ್​ಡಿಸಿಎಲ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಈ ರಸೀದಿಯಲ್ಲಿ ವಾಹನದ ಸಂಖ್ಯೆಯೂ ನಮೂದಾಗುವುದಿಲ್ಲ. ವಾಹನ ಚಾಲಕರು ಪ್ರಶ್ನಿಸಿದರೆ ನಾವು ತಾತ್ಕಾಲಿಕವಾಗಿ ಗುತ್ತಿಗೆ ಪಡೆದಿದ್ದೇವೆ. ನೀವು ಈ ಕುರಿತು ಕೆಆರ್​ಡಿಸಿಎಲ್​ನವರನ್ನು ಸಂರ್ಪಸಿ ಎಂದು ಹಾರಿಕೆ ಉತ್ತರ ನೀಡಿ ಕಳಿಸುತ್ತಿದ್ದಾರೆ.

    ಮೂಲ ಸೌಲಭ್ಯಗಳೂ ಇಲ್ಲ: ಟೋಲ್​ನಲ್ಲಿ ಯಾವುದೇ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ಶೌಚಗೃಹ, ಸಿಸಿ ಕ್ಯಾಮರಾ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿ ಯಾವುದೇ ಸೌಲಭ್ಯಗಳಿಲ್ಲ. ಕಾರು, ಜೀಪ್, ವ್ಯಾನ್​ಗಳಿಗೆ ಒಂದು ಬಾರಿ ಸಂಚಾರಕ್ಕೆ 20 ರೂ., ಲಘು ವಾಣಿಜ್ಯ ವಾಹನ ಮಿನಿ ಬಸ್​ಗಳಿಗೆ 35, ಬಸ್, ಟ್ರಕ್ ವಾಣಿಜ್ಯ ವಾಹನಗಳಿಗೆ 70, ಭಾರಿ 4ರಿಂದ 6 ಆಕ್ಸಲ್ ವಾಹನಗಳಿಗೆ 110, 7 ಹಾಗೂ ಅದಕ್ಕಿಂತ ಹೆಚ್ಚು ಆಕ್ಸಲ್ ಹೊಂದಿದ ವಾಹನಗಳಿಗೆ 135 ರೂ. ದರ ನಿಗದಿಪಡಿಸಲಾಗಿದೆ. ಟೋಲ್​ನಲ್ಲಿ ಫಾಸ್ಟ್ಯಾಗ್ ಸೌಲಭ್ಯ ನಿರ್ಮಾಣ ಹಂತದಲ್ಲಿದೆ ಎಂಬ ಬೋರ್ಡ್ ಕಾಣುತ್ತದೆ. ಆದರೆ, ಇನ್ನೂ ಯಾವ ಸೌಲಭ್ಯ ಕಲ್ಪಿಸಿಲ್ಲ. ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲದ್ದರಿಂದ ಇಲ್ಲಿನ ಯಾವ ದೃಶ್ಯಾವಳಿಗಳೂ ಸೆರೆಯಾಗುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕೆಆರ್​ಡಿಸಿಎಲ್ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕರೆಯನ್ನೇ ಸ್ವೀಕರಿಸುವುದಿಲ್ಲ. ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ ಎಂಬುದು ವಾಹನ ಚಾಲಕರ ಆರೋಪವಾಗಿದೆ.

    ಹಗಲು ದರೋಡೆ: ಟೋಲ್ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡುವ ಇವರು ಯಾರೆಂಬುದು ಈ ಭಾಗದವರಿಗೆ ಗೊತ್ತಿಲ್ಲ. ಈ ಹಿಂದೆ ಟೆಂಡರ್ ಪಡೆದವರು ಸರ್ಕಾರಕ್ಕೆ ಹಣ ಕಟ್ಟದೇ ಇರುವುದರಿಂದ ಅವರನ್ನು ಬಿಡಿಸಿ ತಿಪ್ಪಣ್ಣ ಎಂಬುವರಿಗೆ ಹಣ ಸಂಗ್ರಹಕ್ಕೆ ತಾತ್ಕಾಲಿಕವಾಗಿ ಗುತ್ತಿಗೆ ನೀಡಲಾಗಿದೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ನಮಗೇನೂ ಗೊತ್ತಿಲ್ಲ. ನಾವ್ಯಾಕೆ ಇಲ್ಲಿ ನೀರು, ನೆರಳು, ಶೌಚಗೃಹ ವ್ಯವಸ್ಥೆ ಕಲ್ಪಿಸೋಣ. ಬೇಕಾದರೆ ಕೆಆರ್​ಡಿಸಿಎಲ್ ಅಧಿಕಾರಿ ರವೀಂದ್ರನಾಥ ಎಂಬುವರಿದ್ದಾರೆ, ಅವರನ್ನೇ ಕೇಳಿ ಎಂದು ಸಾರ್ವಜನಿಕರನ್ನು ದಬಾಯಿಸುತ್ತಿದ್ದಾರೆ. ಎಲ್ಲರೂ ಸೇರಿ ಹಗಲು ದರೋಡೆ ನಡೆಸಿದ್ದಾರೆ ಎಂದು ರೈತ ಸಂಘದ ಮುಖಂಡ ದೀಪಕ ಘಂಟಿ ದೂರುತ್ತಾರೆ.

    ಕರೆ ಸ್ವೀಕರಿಸದ ಅಧಿಕಾರಿ: ಆಲದಕಟ್ಟಿ ಬಳಿ ಟೋಲ್​ನಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹಣೆಯ ಗುತ್ತಿಗೆಯನ್ನು ಯಾರಿಗೆ ನೀಡಲಾಗಿದೆ. ಎಷ್ಟು ಅವಧಿಗೆ ನೀಡಲಾಗಿದೆ ಎಂಬ ಮಾಹಿತಿ ಕೇಳಲು ಕೆಆರ್​ಡಿಸಿಎಲ್ ಇಇ ರವೀಂದ್ರನಾಥ ಅವರಿಗೆ (9448179254) ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮಾಧ್ಯಮದವರಿಗೆ ಹೀಗೆ ಮಾಡುವ ಇವರು ಸಾರ್ವಜನಿಕರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಪ್ರಶ್ನಾರ್ಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts