
ಮದ್ದೂರು: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿದರೆ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಲಿದ್ದು, ಇದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ತಾಲೂಕಿನ ಕೊಪ್ಪದಲ್ಲಿ ಶನಿವಾರ ಗ್ರಾಮಾಂತರ ಶಿಕ್ಷಣ ಟ್ರಸ್ಟ್‌ನ ಸರ್ ಎಂ.ವಿ. ಹಿರಿಯ ಪ್ರಾಥಮಿಕ ಶಾಲೆ, ಚನ್ನೇಗೌಡ ಪ್ರೌಢಶಾಲೆ ಕೊಪ್ಪ ವತಿಯಿಂದ ಆಯೋಜಿಸಿದ್ದ ಪಾಲಕರ ದಿನಾಚರಣೆ, ಶಾಲಾ ವಾರ್ಷಿಕೋತ್ಸವ ಹಾಗೂ ಸಿ.ತಮ್ಮಯ್ಯ ಅವರ 75 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಲ್ಲಿ ಆಗಾಧವಾದ ಶಕ್ತಿಯಿದ್ದು, ಅವರಿಗೆ ಶಿಕ್ಷಕರು ಮತ್ತು ಪಾಲಕರು ಉತ್ತಮ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಗ್ರಾಮಾಂತರ ಶಿಕ್ಷಣ ಟ್ರಸ್ಟ್‌ನ ಸರ್‌ಎಂ.ವಿ. ಹಿರಿಯ ಪ್ರಾಥಮಿಕ ಶಾಲೆ, ಚನ್ನೇಗೌಡ ಪ್ರೌಢಶಾಲೆ ಗ್ರಾಮಾಂತರ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ಗುಣಾತ್ಮಕ ಶಿಕ್ಷಣ ನೀಡಿ, ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದರು. ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥಸ್ವಾಮಿ ಮಾತನಾಡಿ, ಪ್ರಪಂಚದಲ್ಲಿ ಶಿಕ್ಷಣಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ. ಇದನ್ನರಿತು ಮಕ್ಕಳು ಕಠಿಣ ಪರಿಶ್ರಮಪಟ್ಟು ವ್ಯಾಸಂಗ ಮಾಡಬೇಕು. ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಜತೆಗೆ ಗುರು ಹಿರಿಯರನ್ನು ಗೌರವಿಸುವುದು, ಮಾನವೀಯ ಮೌಲ್ಯ ಹಾಗೂ ಸೇವಾ ಮನೋವವನ್ನು ಜೀವನದಲ್ಲಿ ರೂಢಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಗ್ರಾಮಾಂತರ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಸಿ.ತಮ್ಮಯ್ಯ, ಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ಕೆ.ಬಿ.ನಾರಾಯಣ, ನಿರ್ದೇಶಕರಾದ ಪುಟ್ಟಸ್ವಾಮಿ, ಮರೀಗೌಡ, ಮಲ್ಲಿಕಾರ್ಜುನ, ಚನ್ನಮ್ಮ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಗ್ರಾಪಂ ಅಧ್ಯಕ್ಷ ರುದ್ರೇಶ್, ತಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಉಪಾಧ್ಯಕ್ಷರಾದ ಬೆಕ್ಕಳಲೆ ರಘು, ರಾಮಚಂದ್ರು, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ, ಗುತ್ತಿಗೆದಾರ ಸುರೇಶ್‌ಗೌಡ ಇತರರು ಇದ್ದರು.