ಸಂತಾಪ ಸೂಚಕ ಸಭೆಯಲ್ಲಿ ನಗುತ್ತಾ ಕುಳಿತಿದ್ದ ಬಿಜೆಪಿ ಸಚಿವರ ವಿಡಿಯೋ ವೈರಲ್‌

ರಾಯ್‌ಪುರ: ಅಜಾತ ಶತ್ರು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಸ್ಥಿ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಾಜಪೇಯಿಗೆ ಗೌರವ ಸೂಚಿಸುತ್ತಿದ್ದರೆ ಇತ್ತ ಸಂತಾಪ ಸೂಚಕ ಸಭೆಯಲ್ಲಿ ಬಿಜೆಪಿ ನಾಯಕರಿಬ್ಬರು ಅಗೌರವ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಿಜೆಪಿ ಆಡಳಿತವಿರುವ ಛತ್ತೀಸ್‌ಗಡ ರಾಜ್ಯದ ಕೃಷಿ ಸಚಿವ ಬ್ರಿಜ್‌ಮೋಹನ್‌ ಅಗರ್‌ವಾಲ್‌ ಮತ್ತು ಆರೋಗ್ಯ ಸಚಿವ ಅಜಯ್‌ ಚಂದ್ರಕರ್‌ ಇಬ್ಬರು ಸಂತಾಪ ಸೂಚಕ ಸಭೆಯಲ್ಲಿ ವೇದಿಕೆ ಮೇಲೆ ಮಾತನಾಡಿಕೊಂಡು ನಗುತ್ತಿದ್ದ ವಿಡಿಯೋ ವೈರಲ್‌ ಆಗಿದೆ.

ದೇಶದ ಪ್ರಮುಖ 100 ನದಿಗಳಲ್ಲಿ ವಾಜಪೇಯಿ ಅವರ ಚಿತಾಭಸ್ಮವನ್ನು ವಿಸರ್ಜನೆ ಮಾಡಲೆಂದು ಬುಧವಾರ ಸಂತಾಪ ಸೂಚಕ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಈ ವೇಳೆ ಅಜಯ್ ಚಂದ್ರಶೇಖರ್‌ ಅವರು ನಗುತ್ತಾ ಟೇಬಲ್‌ನ್ನು ಬಡಿದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಬಿಜೆಪಿ ಮುಖ್ಯಸ್ಥ ಧರ್ಮಲಾಲ್‌ ಕೌಶಿಕ್‌ ಅವರು ಚಂದ್ರಶೇಖರ್ ಅವರ ಕೈಹಿಡಿದು ಅಲ್ಲಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಇನ್ನು ಇದೇ ವೇದಿಕೆಯಲ್ಲಿ ಮುಖ್ಯಮಂತ್ರಿ ರಮಣ್‌ ಸಿಂಗ್ ಕೂಡ ಇದ್ದರು.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಘಟನೆ ಕುರಿತಂತೆ ವಿಪಕ್ಷ ಕಾಂಗ್ರೆಸ್‌ ಇಬ್ಬರು ಸಚಿವರ ನಡೆಗೆ ಕಿಡಿಕಾರಿದೆ.

ಅಟಲ್‌ ಬಿಹಾರಿ ವಾಜಪೇಯಿ ಅವರು ಬದುಕಿದ್ದಾಗಲೇ ಬಿಜೆಪಿ ಅವರನ್ನು ಮೂಲೆಗುಂಪು ಮಾಡಿತ್ತು. ಆದರೀಗ ಹಿರಿಯ ನಾಯಕರೊಬ್ಬರಿಗೆ ಗೌರವ ಕೊಡದಿರುವುದನ್ನು ಈ ಇಬ್ಬರು ಸಚಿವರ ನಡೆ ಸ್ಪಷ್ಟವಾಗಿ ತೋರಿಸುತ್ತಿದೆ. ಇದು ಖಂಡನೀಯ. ಬಿಜೆಪಿ ನಾಯಕರಿಗೆ ಅಟಲ್‌ ಜಿ ಅವರನ್ನು ಗೌರವಿಸಲು ಸಾಧ್ಯವಾಗದಿದ್ದರೂ, ಅಗೌರವ ತೋರುವುದು ಬೇಡ. ಅವರು ಕೊನೆಯುಸಿರೆಳೆದ ಮೇಲೆ ಬಿಜೆಪಿ ಪ್ರೀತಿ ಮತ್ತು ಗೌರವ ಇರುವ ರೀತಿ ನಾಟಕವಾಡುತ್ತಿದೆ ಎಂದು ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಶೈಲೇಶ್‌ ನಿತಿನ್‌ ತ್ರಿವೇದಿ ತಿಳಿಸಿದ್ದಾರೆ. (ಏಜೆನ್ಸೀಸ್)