17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್​ ಶೂನ್ಯ ಸಂಪಾದನೆ: ಅಮಿತ್​ ಷಾ ಲೇವಡಿ

ನವದೆಹಲಿ: ಈ ಬಾರಿಯು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ಕೊಡಿಸಿಕೊಟ್ಟ ನಂತರದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಕಾಂಗ್ರೆಸ್​, ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರನ್ನು ಲೇವಡಿ ಮಾಡಿದ್ದಾರೆ.

ನವದೆಹಲಿಯಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ವಿಜಯ ಭಾಷಣ ಮಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್​ ಶೂನ್ಯ ಸಂಪಾದನೆ ಮಾಡಿದೆ ಎಂದರು.

ಉತ್ತರ ಪ್ರದೇಶದಲ್ಲಿನ ಚುನಾವಣಾ ಫಲಿತಾಂಶವನ್ನು ಗಮನಿಸಿದಾಗ ಪರಿವಾರವಾದಿಗಳ ಪಕ್ಷದ ಅಂತ್ಯವಾಗಿರುವುದು ಸ್ಪಷ್ಟವಾಗುತ್ತದೆ ಎಂದರು. ತನ್ಮೂಲಕ ಗಾಂಧಿ ಪರಿವಾರದ ಭದ್ರಕೋಟೆ ಅಮೇಠಿಯಲ್ಲೇ ರಾಹುಲ್​ ಗಾಂಧಿ ಅವರನ್ನು ಸ್ಮೃತಿ ಇರಾನಿ ಮಣಿಸಿರುವ ಸಂಗತಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಎರಡು ದಿನಗಳ ಹಿಂದೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆ ಯಾರೋ ಒಬ್ಬರಿಗೆ ಸಹ್ಯವಾಗಲಿಲ್ಲ. ಚುನಾವಣೋತ್ತರ ಸಮೀಕ್ಷೆಗಳು ತಪ್ಪಾಗಿವೆ ಎಂಬ ಭ್ರಮೆ ಮೂಡಿಲು ಯತ್ನಿಸಿದರು. ಎಲ್ಲರೂ, ಎಲ್ಲರನ್ನೂ ಭೇಟಿಯಾಗಲಾರಂಭಿಸಿದರು. ಆದರೆ ಇಂದು ಬಿಜೆಪಿ ಗೆದ್ದಿದೆ. ಹಾಗಾಗಿ ಪರಿವಾರವಾದಿ ಪಕ್ಷಗಳು ಅದರಲ್ಲೂ ವಿಶೇಷವಾಗಿ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರೆ, ಈ ಚುನಾವಣೆಯಲ್ಲಿ ನೀವು ಹಾಕಿದ ಪರಿಶ್ರಮಕ್ಕೆ ತಕ್ಕಂತೆ ಕನಿಷ್ಠ ಖಾತೆ ತೆರೆಯಲಾದರೂ ನಿಮಗೆ ಸಾಧ್ಯವಾಗಿದ್ದರೆ ಚೆನ್ನಾಗಿತ್ತು ಎಂದು ಲೇವಡಿ ಮಾಡಿದರು.

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಪ್ರಸ್ತಾಪಿಸದೆ ಅಷ್ಟೊಂದು ಹಿಂಸಾಚಾರದ ನಡುವೆಯೂ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 18 ಸೀಟುಗಳನ್ನು ಗೆದ್ದುಕೊಂಡಿತು. ಜತೆಗೆ, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ದಾಖಲಿಸಿತು. ಇದನ್ನು ಗಮನಿಸಿದಾಗ, ಮುಂಬರುವ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎಂದರು.