ಬಹುಮತ ಪಡೆಯದ ನಾವು ಸರ್ಕಾರವನ್ನು ರಚನೆ ಮಾಡುವುದಿಲ್ಲ: ಶಿವರಾಜ್​ಸಿಂಗ್​ ಚೌಹಾಣ್​ ಸ್ಪಷ್ಟನೆ

ಭೋಪಾಲ್​: ಮೂರು ಅವಧಿಗಳ ಕಾಲ ಮಧ್ಯಪ್ರದೇಶದ ಗದ್ದುಗೆಯಲ್ಲಿ ಆಡಳಿತ ನಡೆಸಿ, ನಾಲ್ಕನೇ ಬಾರಿಯ ಆಯ್ಕೆಯ ಹೊಸ್ತಿಲಲ್ಲೇ ಮುಗ್ಗರಿಸಿ ಬಿಜೆಪಿಯ ಸೋಲಿನ ಹೊಣೆ ಹೊತ್ತು ಹೊರ ನಡೆದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಬಹುಮತ ಪಡೆದ ಕಾಂಗ್ರೆಸ್​ ಸರ್ಕಾರವನ್ನು ಅಭಿನಂದಿಸಿದ್ದು, ನಾವು ಸರ್ಕಾರ ರಚನೆಯ ಅವಕಾಶಕ್ಕಾಗಿ ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

230 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​ 114 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೂ ಸರಳ ಬಹುಮತಕ್ಕೆ 116 ಸ್ಥಾನಗಳು ಬೇಕಾಗಿದ್ದು, ಮಾಯಾವತಿ ನೇತೃತ್ವದ ಬಿಎಸ್​ಪಿ, ಸಮಾಜವಾದಿ ಪಕ್ಷದ ಅಖಿಲೇಶ್​ ಯಾದವ್ ಹಾಗೂ ನಾಲ್ಕು ಮಂದಿ ಸ್ವತಂತ್ರ ಅಭ್ಯರ್ಥಿಗಳು ಈಗಾಗಲೇ ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದ್ದಾರೆ.​

109 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಸರ್ಕಾರ ರಚನೆಗೆ ಅವಕಾಶ ಕೋರಿ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಶಿವರಾಜ್​ಸಿಂಗ್​ ಚೌಹಾನ್ ಇದಕ್ಕೆ ಪ್ರತಿಕ್ರಿಯಿಸಿ, ನಾವು ಬಹುಮತವನ್ನು ಪಡೆಯಲು ಸಾಧ್ಯವಾಗದೇ ಇರುವುದುರಿಂದ ನಾವು ಸರ್ಕಾರವನ್ನು ರಚನೆ ಮಾಡಲು ರಾಜ್ಯಪಾಲರ ಅವಕಾಶವನ್ನು ಕೇಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಸೋಲು ಅಥವಾ ಗೆಲುವು ನನ್ನಲ್ಲಿ ಯಾವುದೇ ತಲ್ಲಣ ಉಂಟು ಮಾಡುವುದಿಲ್ಲ. ನನ್ನ ಕರ್ತವ್ಯದ ದಾರಿಯಲ್ಲಿ ಏನೆಲ್ಲಾ ಬರುತ್ತದೆ ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಚೌಹಾಣ್​ ತಿಳಿಸಿದರು. ಹಾಗೇ ಚುನಾವಣೆಯಲ್ಲಿ ಶ್ರಮವಹಿಸಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. (ಏಜೆನ್ಸೀಸ್​)