ನೆರೆ ರಾಷ್ಟ್ರ ಹೊರೆಯಲ್ಲ: ಮಾಲ್ಡೀವ್ಸ್​ ಸಂಸತ್ತಿನಲ್ಲಿ ಮೋದಿ ಭಾಷಣ, ಪಾಕ್​ಗೆ ಪರೋಕ್ಷ ಚಾಟಿ

ಮಾಲೆ: ಭಾರತದಲ್ಲಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್’ ಎನ್ನುವ ಮಂತ್ರದೊಂದಿಗೆ ಚುನಾವಣೆ ಗೆದ್ದು ಬಂದಿದ್ದೇನೆ. ಭಾರತವು ಈ ಮಂತ್ರವನ್ನು ನೆರೆಹೊರೆಯ ರಾಷ್ಟ್ರಗಳಿಗೂ ವಿಸ್ತರಿಸಲಿದೆ. ಭಾರತಕ್ಕೆ ನೆರೆಹೊರೆಯ ರಾಷ್ಟ್ರಗಳ ಅಭಿವೃದ್ಧಿ ಕೂಡ ಮೊದಲ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದ್ವೀಪರಾಷ್ಟ್ರ ಮಾಲ್ದೀವ್ಸ್ ಸಂಸತ್ತು ಉದ್ದೇಶಿಸಿ ಶನಿವಾರ ಮಾತನಾಡಿದ ಮೋದಿ, ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಬಗ್ಗೆ ವಿವರಣೆ ನೀಡಿದರು. ನೂರಾರು ವರ್ಷಗಳಿಂದ ಭಾರತ ಹಾಗೂ ಮಾಲ್ದೀವ್ಸ್ ನಡುವೆ ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧವಿದೆ. ಈ ಸಂಬಂಧವನ್ನು ಭವಿಷ್ಯದಲ್ಲಿಯೂ ಭಾರತ ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು ಮಾಲ್ದೀವ್ಸ್​ನಲ್ಲಿ ಪ್ರಜಾತಂತ್ರ ಸರ್ಕಾರ ಬರಲು ಸಹಕಾರ ನೀಡಿತ್ತು. ಭವಿಷ್ಯದಲ್ಲಿಯೂ ಮಾಲ್ದೀವ್ಸ್ ಅಭಿವೃದ್ಧಿಗೆ ಭಾರತ ಬದ್ಧವಾಗಿದೆ. ಇದೇ ಕಾರಣಕ್ಕೆ ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ ಮಾಲ್ದೀವ್ಸ್​ಗೆ ಮೊದಲ ಭೇಟಿ ನೀಡಿದ್ದೇನೆ ಎಂದು ಮೋದಿ ತಿಳಿಸಿದರು.

ಭಯೋತ್ಪಾದನೆ ಪ್ರಸ್ತಾಪ: ಭಯೋತ್ಪಾದನೆಗೆ ಸಂಬಂಧಿಸಿ ಇಂದಿಗೂ ಒಳ್ಳೆಯದ್ದು ಹಾಗೂ ಕೆಟ್ಟದ್ದು ಎಂಬ ವಿಭಜನೆ ನಡೆಯುತ್ತಿದೆ. ಇಂತಹ ವಾದಕ್ಕೆ ತೆರೆ ಎಳೆಯಬೇಕಿದೆ. ಈಗಾಗಲೇ ಭಯೋತ್ಪಾದನೆ ಎನ್ನುವ ನೀರು ಮನುಷ್ಯನ ಕುತ್ತಿಗೆಯವರೆಗೆ ಬಂದಿದೆ. ಈಗ ಕಠಿಣ ಕ್ರಮಕ್ಕೆ ಮುಂದಾಗದಿದ್ದರೆ ನಮ್ಮನ್ನು ಮುಳುಗಿಸಲಿದೆ ಎಂದು ಮೋದಿ ಹೇಳಿದರು. ಪಾಕಿಸ್ತಾನದ ಉಲ್ಲೇಖ ಮಾಡದೇ ಮಾತನಾಡಿದ ಮೋದಿ, ಭಯೋತ್ಪಾದನೆ ಹಾಗೂ ಮೂಲಭೂತವಾದದ ವಿರುದ್ಧ ಹೋರಾಡುವುದು ಇಂದಿನ ಜಾಗತಿಕ ನಾಯಕರಿಗಿರುವ ದೊಡ್ಡ ಸವಾಲಾಗಿದೆ. ಆಯಾ ರಾಷ್ಟ್ರಗಳು ಇಂತಹ ವ್ಯವಸ್ಥೆ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಬೇಕಿದೆ ಎಂದು ಮೋದಿ ಹೇಳಿದರು.

ಭಾಷಣದುದ್ದಕ್ಕೂ ಭಾರತ ಹಾಗೂ ಮಾಲ್ದೀವ್ಸ್​ನ ಹಳೆಯ ಸಂಬಂಧ, ಸಂಸ್ಕೃತಿ, ಭಾಷಾ ಸಾಮ್ಯತೆ ಬಗ್ಗೆ ಮೋದಿ ಉಲ್ಲೇಖ ಮಾಡಿದರು. ಭಾಷಣದ ಕೊನೆಯಲ್ಲಿ ಪ್ರತಿಯೊಬ್ಬ ಸಂಸದರನ್ನು ಭೇಟಿ ಮಾಡಿ ಕೈ ಕುಲುಕಿದರು. ಭಾನುವಾರ ಅವರು ಶ್ರೀಲಂಕಾಕ್ಕೆ ಮೋದಿ ಭೇಟಿ ನೀಡಲಿದ್ದು, ಏಪ್ರಿಲ್​ನಲ್ಲಿ ನಡೆದ ಭಯೋತ್ಪಾದನೆ ದಾಳಿ ಕುರಿತು ದೇಶಕ್ಕೆ ಸಾಂತ್ವನ ಹೇಳಲಿದ್ದಾರೆ.

ಆರು ಒಪ್ಪಂದಗಳಿಗೆ ಸಹಿ

  • ಭಾರತೀಯ ನೌಕಾ ಸೇನೆ ಹಾಗೂ ಮಾಲ್ದೀವ್ಸ್ ಸೇನೆ ನಡುವೆ ಹೈಡ್ರೋಗ್ರಫಿ ವಲಯದಲ್ಲಿ ಸಹಕಾರ
  • ಉಭಯ ದೇಶಗಳ ಆರೋಗ್ಯ ಕ್ಷೇತ್ರದಲ್ಲಿ ಸಹಕಾರ
  • ಉಭಯ ದೇಶಗಳ ನಡುವೆ ಪ್ರಯಾಣಿಕರು, ಕಾಗೋ ಸೇವೆ
  • ಮಾಲ್ದೀವ್ಸ್ ತೆರಿಗೆ ವ್ಯವಸ್ಥೆ ಸುಧಾರಣೆಗೆ ಸಹಕಾರ
  • ಮಾಲ್ದೀವ್ಸ್ ಆಡಳಿತ ವ್ಯವಸ್ಥೆ ಸುಧಾರಣೆಗೆ ಸಹಕಾರ
  • ಈ ಹಿಂದಿನ 130 ಕೋಟಿ ಡಾಲರ್ ಸಾಲದ ಹೊರತಾಗಿ ಮತ್ತೆ ಹೊಸದಾಗಿ ಮಾಲ್ದೀವ್ಸ್​ಗೆ 80 ಕೋಟಿ ಡಾಲರ್ ಸಾಲ ನೀಡಿಕೆ

ಮಾಲ್ದೀವ್ಸ್​ನ ಅತ್ಯುನ್ನತ ನಾಗರಿಕ ಪುರಸ್ಕಾರ

ಪ್ರಧಾನಿ ನರೇಂದ್ರ ಮೋದಿಗೆ ಮಾಲ್ದೀವ್ಸ್​ನ ಅತ್ಯುನ್ನತ ನಾಗರಿಕ ಪುರಸ್ಕಾರ ‘ನಿಶಾನ್ ಇಜ್ಜುದ್ದೀನ್’ ನೀಡಿ ಶನಿವಾರ ಗೌರವಿಸಲಾಗಿದೆ. ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಸೊಲಿಹ್ ಅವರು ಈ ಪುರಸ್ಕಾರವನ್ನು ಮೋದಿಗೆ ನೀಡಿ ಗೌರವಿಸಿದರು. ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಮೋದಿ, ಮಾಲ್ದೀವ್ಸ್ ಜನತೆ ಹಾಗೂ ಅಧ್ಯಕ್ಷರಿಗೆ ಭಾರತೀಯರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.

ಕ್ರಿಕೆಟಿಗರ ಸಹಿಯುಳ್ಳ ಬ್ಯಾಟ್ ಉಡುಗೊರೆ

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಭಾರತೀಯ ಆಟಗಾರರ ಸಹಿಯುಳ್ಳ ಬ್ಯಾಟನ್ನು ಮಾಲ್ದೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್​ಗೆ ಮೋದಿ ನೀಡಿದ್ದಾರೆ. ಕ್ರಿಕೆಟ್ ಕುರಿತು ಅತೀವ ಆಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗರ ಸಹಿಯುಳ್ಳ ಬ್ಯಾಟನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ.

ಕಮಲದಲ್ಲಿ ನಮೋ ತುಲಾಭಾರ

ಕೊಚ್ಚಿ: ಕೇರಳದ ಖ್ಯಾತ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ತುಲಾಭಾರ ಸೇವೆ ಮಾಡಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆಗೆ ದೇವಸ್ಥಾನಕ್ಕೆ ಬಂದ ಪ್ರಧಾನಿ ಮೋದಿಗೆ 111 ಕೆ.ಜಿ ತಾವರೆ ಹೂವಿನ ತುಲಾಭಾರ ಮಾಡಲಾಯಿತು. ತಮಿಳುನಾಡಿನ ನಾಗರಕೊಯಿಲ್​ನಿಂದ ತಂದಿದ್ದ ತಾವರೆ ಹೂವುಗಳನ್ನು ತಕ್ಕಡಿಯಲ್ಲಿರಿಸಿ ಮೋದಿಯನ್ನು ತೂಗಲಾಯಿತು. ತಾವರೆ ಜತೆಗೆ ಸಂಪ್ರದಾಯದಂತೆ ಹಣ್ಣು ಹಾಗೂ ಕೆಲ ಧಾನ್ಯಗಳನ್ನು ಕೂಡ ಬಳಸಲಾಗಿತ್ತು. ಗುರುವಾಯೂರು ದೇವಸ್ಥಾನದಲ್ಲಿ ಮೋದಿ ಸುಮಾರು ಅರ್ಧ ಗಂಟೆ ಕಾಲ ಕಳೆದರು. ಈ ಸಂದರ್ಭದಲ್ಲಿ ತುಲಾಭಾರದ ಜತೆಗೆ ತುಪ್ಪದ ಅಭಿಷೇಕ ಸೇರಿ ದೇವಾಲಯದ ಇತರ ಸಾಂಪ್ರದಾಯಿಕ ಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತನಾಡಿದರು.

ಭಾಷಣದ ಪ್ರಮುಖಾಂಶ

  • ಬಿಜೆಪಿ ಒಂದು ಸೀಟು ಗೆಲ್ಲದಿದ್ದರೂ ಕೇರಳಕ್ಕೆ ಮೋದಿ ಮೊದಲ ಭೇಟಿ ನೀಡಿದ್ದು ಏಕೆ ಎಂದು ಸಾಕಷ್ಟು ಜನ ಆಶ್ಚರ್ಯ ಪಡುತ್ತಿದ್ದಾರೆ.
  • ಮೋದಿಗೆ ಗೆಲ್ಲಿಸದ ಕೇರಳ ಹಾಗೂ ವಾರಾಣಸಿ ಒಂದೇ ರೀತಿ. ವಾರಾಣಸಿ ಜನರನ್ನು ಪ್ರೀತಿಸುವಷ್ಟೇ ಕೇರಳಿಗರನ್ನು ಇಷ್ಟಪಡುತ್ತೇನೆ
  • ದೇಶದಲ್ಲಿ ಕೆಲವರಿಗೆ ಮತದಾರರ ಮನದಾಳ ತಿಳಿಯುವುದೇ ಇಲ್ಲ. ಹೀಗಾಗಿ ಹೊಸ ಸರ್ಕಾರ ರಚನೆ ಬಗ್ಗೆ ಸಾಕಷ್ಟು ವರದಿ, ಕಥೆಗಳನ್ನು ಕಟ್ಟಿದ್ದರು.

ಮುಂಡು, ಶಲ್ಯದಲ್ಲಿ ಮೋದಿ ಮಿಂಚು

ಕೇರಳದ ಶುಭ್ರ ಬಿಳಿ ಮುಂಡು ಹಾಗೂ ಶಲ್ಯ ಖ್ಯಾತಿ ಪಡೆದಿದೆ. ಪ್ರಧಾನಿ ಮೋದಿ ಕೂಡ ಕೇರಳದಲ್ಲಿ ಬಿಳಿ ಮುಂಡು, ಶಾಲು ಧರಿಸಿ ಮಿಂಚಿದರು. ಗುರುವಾಯೂರು ದೇವಸ್ಥಾನಕ್ಕೆ ಪ್ರವೇಶಿಸಲು ಇದು ಸಮವಸ್ತ್ರವಾಗಿದೆ. ಆದರೆ ಅಲ್ಲಿಂದ ತೆರಳಿ ಸಮಾವೇಶದಲ್ಲಿ ಪಾಲ್ಗೊಳ್ಳುವಾಗಲೂ ಕೂಡ ಮೋದಿ ಮುಂಡು, ಶಲ್ಯ ಹಾಗೂ ಅಂಗಿಯಲ್ಲಿ ಕಾಣಿಸಿಕೊಂಡರು.

Leave a Reply

Your email address will not be published. Required fields are marked *