ಸಂಡೂರು: ಯುಜಿಸಿ ಎಲ್ಲ ವಿವಿಗಳಲ್ಲಿ ಆ.12ರಿಂದ 18ರವರೆಗೆ ರ‌್ಯಾಗಿಂಗ್ ವಿರೋಧಿ ಸಪ್ತಾಹ ಆಚರಿಸಲು ಸೂಚಿಸಿದೆ ಎಂದು ಎನ್ನೆಸ್ಸೆಸ್ ಘಟಕಾಧಿಕಾರಿ ಡಾ.ಕೆ.ಜಿ.ಸುಮ ಹೇಳಿದರು.
ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಏರ್ಪಡಿಸಿದ್ದ ರ‌್ಯಾಗಿಂಗ್ ವಿರೋಧಿ ಸಪ್ತಾಹದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ರ‌್ಯಾಗಿಂಗ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ತಡೆಗಟ್ಟುವುದು ಇದರ ಉದ್ದೇಶವಾಗಿದೆ. ಭಾರತದಲ್ಲಿ ಆ.12ಅನ್ನು ರ‌್ಯಾಗಿಂಗ್ ವಿರೋಧಿ ದಿನವನ್ನಾಗಿ ಆಚರಿಸುತ್ತಿದ್ದು, ಅದರಡಿಯಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ 2009ರಲ್ಲಿ ಸರ್ಕಾರ ಸಹಾಯವಾಣಿ ಆರಂಭಿಸಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕ 1ರ ಅಧಿಕಾರಿ ಡಾ.ವಿ.ಚೌಡಪ್ಪ ಮಾತನಾಡಿ, ರ‌್ಯಾಗಿಂಗ್ ಮಾಡುವ ವಿದ್ಯಾರ್ಥಿಗಳಿಗೆ ಭಾರತ ನ್ಯಾಯ ಸಂಹಿತೆ ಅಡಿಯಲ್ಲಿ ಶಿಕ್ಷೆಯಾಗಲಿದೆ. ದೇಶದ ವಿವಿ ಮತ್ತು ಕಾಲೇಜುಗಳಲ್ಲಿ ನಡೆಯುವ ರ‌್ಯಾಗಿಂಗ್ ಭೂತವನ್ನು ತಡೆಗಟ್ಟುವುದು ಪ್ರತಿಯೊಬ್ಬ ವಿದ್ಯಾರ್ಥಿ ಕರ್ತವ್ಯವಾಗಿದೆ ಎಂದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಪಿ.ಶರತಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ.ಮುಬಾರಕ್, ಪ್ರಭಾರ ನಿರ್ದೇಶಕ ಡಾ.ಶಶಿಧರ ಇತರರಿದ್ದರು.