ಶಿರಸಿ: ನಗರದ ಟಿಎಸ್ಎಸ್ ಸಂಸ್ಥೆಯಲ್ಲಿ ಅಧ್ಯಕ್ಷರ ಚೇಂಬರ್ಗೆ ಅಕ್ರಮವಾಗಿ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿ, ಅದನ್ನು ತಡೆಯಲು ಬಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಇಬ್ಬರು ಯುವತಿಯರನ್ನು ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ತಡಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (33) ಹಾಗೂ ರಂಜಿತಾ ಹರಿಹರ ಹೆಗಡೆ (35) ದಾಂಧಲೆ ನಡೆಸಿ, ಬಂಧಿತರಾದ ಯುವತಿಯರು.
ಸಂಸ್ಥೆಯ ಸಿಬ್ಬಂದಿ ಈ ಯುವತಿಯರ ವಿರುದ್ಧ ದೂರು ನೀಡಿದ್ದು, ಈ ಯುವತಿಯರು ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗೆ ಅವಾಚ್ಯ ಶಬ್ದದಿಂದ ನಿಂದಿಸಿ, ಹಲ್ಲೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ರತ್ನಾ ಕುರಿ ಅವರ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಸಂಸ್ಥೆಯಲ್ಲಿ ಠೇವಣಿ ಇಟ್ಟ ಹಣದ ವಾಪಸಾತಿ ಕುರಿತು ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಈ ಯುವತಿಯರು ಸಂಸ್ಥೆಯ ಉಪಾಧ್ಯಕ್ಷ ಎಂ.ಎನ್. ಭಟ್ ಹಾಗೂ ಸಿಬ್ಬಂದಿಯನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ತನಿಖಾ ಪಿಎಸ್ಐ ರಾಜಕುಮಾರ ಉಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿ ಇಬ್ಬರು ಯುವತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.