ಬಾಹುಬಲಿಯಾದ ಶಿವರಾಜ್‌ ಸಿಂಗ್‌ ಚೌಹಾಣ್‌: ವೀಡಿಯೊ ವೈರಲ್‌!

ಮುಂಬೈ: ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಬೆಂಬಲಿಗರು ಪ್ರಚಾರ ಭರಾಟೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ‘ಬಾಹುಬಲಿ’ ಎಂದು ಬಿಂಬಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಎರಡು ನಿಮಿಷಕ್ಕೂ ಅಧಿಕವಿರುವ ಈ ವೀಡಿಯೋದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಬಾಹುಬಲಿಯಾಗಿ ಚಿತ್ರಿಸಲಾಗಿದೆ. ಕಾಂಗ್ರೆಸ್‌ ನಾಯಕರಾದ ಜ್ಯೋತಿರಾದಿತ್ಯ ಸಿಂಧ್ಯಾ, ಕಮಲ್‌ ನಾಥ್‌, ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಮತ್ತು ದಿಗ್ವಿಜಯ್​ ಸಿಂಗ್‌ ಅವರನ್ನು ಪ್ರತಿಸ್ಫರ್ಧಿಗಳಾಗಿ ತೋರಿಸಲಾಗಿದೆ.

ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಕೆಲ ಭವ್ಯ ದೃಶ್ಯಗಳಲ್ಲಿ ಬಾಹುಬಲಿಗೆ ಶಿವರಾಜ್‌ ಸಿಂಗ್‌ ಅವರ ಭಾವಚಿತ್ರ ಜೋಡಿಸಲಾಗಿದ್ದು, ಕೆಲವು ಸ್ಟಂಟ್ಸ್‌ ಮತ್ತು ಸಂಭಾಷಣೆಗಳನ್ನು ಅವರಿಂದ ಹೇಳಿಸಲಾಗಿದೆ. ಅಲ್ಲದೆ ಪ್ರಭಾಸ್‌ ಅವರು ಶಿವಲಿಂಗವನ್ನು ಎತ್ತಿ ಭುಜದ ಮೇಲೆ ಇಟ್ಟುಕೊಂಡು ಸಾಗುವ ದೃಶ್ಯಕ್ಕೂ ಶಿವರಾಜ್‌ ಸಿಂಗ್‌ ಚೌಹಾಣ್‌ರ ಫೋಟೋ ಹೊಂದಿಸಲಾಗಿದೆ.

ಇದಲ್ಲದೆ ವೀಡಿಯೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಕೂಡ ಅಲ್ಲಲ್ಲಿ ತೋರಿಸಲಾಗಿದೆ. ಕ್ಲೈಮ್ಯಾಕ್ಸ್‌ನ ಯುದ್ಧಭೂಮಿಯಲ್ಲಿ ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತು ಜ್ಯೋತಿರಾದಿತ್ಯ ಸಿಂಧ್ಯಾರನ್ನು ತೋರಿಸಲಾಗಿದ್ದು, ಕೊನೆಗೆ ಚೌಹಾಣ್‌ ಅವರೇ ಗೆಲುವು ಸಾಧಿಸುತ್ತಾರೆ. (ಏಜೆನ್ಸೀಸ್)