ಅಥಣಿ: ಸಿದ್ಧಾರೂಢರು ಮತ್ತು ಮುರುಘೇಂದ್ರ ಶಿವಯೋಗಿಗಳು ತೋರಿದ ಪಥದಲ್ಲಿ ಸಾಗುವ ಭಕ್ತರ ಭಕ್ತಿ ಎಂದಿಗೂ ಬತ್ತುವುದಿಲ್ಲ ಎಂದು ಶೇಗುಣಿಸಿಯ ಡಾ.ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಸಮೀಪದ ನದಿ ಇಂಗಳಗಾವಿ ಗ್ರಾಮದ ಗುರುಲಿಂಗದೇವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 64ನೇ ಮಹಾಶಿವರಾತ್ರಿಯ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿ, ಧಾರ್ಮಿಕ ಲೋಕದ ಧ್ರುವತಾರೆಗಳಾಗಿ ಬಸವಣ್ಣನ ವಚನದಂತೆ ನಡೆದು ತೋರಿದವರು ಶಿವಯೋಗಿಗಳು. ಹೀಗಾಗಿ ಇಂದಿನ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ಯುವಜನರು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನತ್ತ ಗಮನಹರಿಸಬೇಕು ಎಂದರು.
ವಿಜಯಪುರದ ಸಿದ್ದಲಿಂಗ ದೇವರು ಮಾತನಾಡಿ, ಒಳ್ಳೆಯ ಕೆಲಸಗಳು ಜೀವನದಲ್ಲಿ ಉತ್ತಮ ಲ ನೀಡುತ್ತವೆ. ಸಾಧ್ಯವಾದಷ್ಟು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ನಿಸ್ವಾರ್ಥ ಮನಸ್ಸು, ವಿಶಾಲ ಹೃದಯವಿರಬೇಕು ಎಂದರು.
ಗುರುಲಿಂಗ ದೇವರ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮುರುಘೇಂದ್ರ ಶಿವಯೋಗಿಗಳು ನಾಡಿಗೆ ಬೆಳಕಾಗಿದ್ದರು. ಅಥಣಿ ಗಚ್ಚಿನಮಠದಲ್ಲಿ ನೆಲೆಸಿ ಪುಣ್ಯಭೂಮಿಯಾಗಿಸಿದ ಮಹಾತ್ಮರು ಎಂದರು.ಹೊನವಾಡದ ಬಾಬುರಾವ ಮಹಾರಾಜರು, ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು.
ಮಕ್ಕಳಿಂದ ವಚನ ರೂಪಕಗಳು ಹಾಗೂ ಮುರುಘೇಂದ್ರ ಸ್ವಾಮೀಜಿ ಭಜನಾ ಸಂಘದಿಂದ ಶಿವಭಜನೆ ಜರುಗಿದವು. ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ಮಹಾಂತೇಶ ಗುಳ್ಳಪ್ಪನವರ, ಭರತ ಸೋಮಯ್ಯ, ಸಂತೋಷ ಸಾವಡಕರ, ಸಂಜಯ ತೆಲಸಂಗ, ಶಿವಕುಮಾರ ತೆಲಸಂಗ, ಶಿವಯೋಗಿ ಮಂಗಸೂಳಿ, ಶಿವಾನಂದ ಹುನ್ನೂರ, ಆರ್.ಎ.ಹಿರೇಮಠ, ರಾಮು ಗಾಡಿವಡ್ಡರ ಇತರರಿದ್ದರು.