ಮೂಗೂರು: ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇಗುಲದಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ತಂದೆಯ ಪೂಜಾ ಸರದಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ನೀಡಬೇಕು ಎಂದು ತಿ.ನರಸೀಪುರ ಜೆಎಂಎಫ್ ಕೋರ್ಟ್ ಅನುಮತಿ ಆದೇಶದೊಂದಿಗೆ ಬಂದವರಿಗೆ ಗ್ರಾಮಸ್ಥರು ನಿರಾಕರಿಸಿದ್ದಾರೆ.
ಈ ಸಂಬಂಧ ನಡೆದ ಶನಿವಾರ ನಡೆದ ಮುಖಂಡರ ಸಂಧಾನ ಸಭೆಯೂ ವಿಫಲವಾಗಿದೆ.
ಗ್ರಾಮದ ಅರ್ಚಕರಾಗಿದ್ದ ದಿ.ತ್ರಿಪುರಾಂತಯ್ಯ ಅವರಿಗೆ ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಇದ್ದು, ತಂದೆಯ ಪೂಜಾ ಸರದಿ ತಮಗೂ ನೀಡಬೇಕು ಎಂಬ ವಿಚಾರವಾಗಿ ಅರ್ಚಕರ ಹೆಣ್ಣು ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಜತೆಗೆ ನಮಗೂ ಅವಕಾಶ ಕಲ್ಪಿಸಿ ಎಂದು ಜೆಎಂಎಫ್‌ಸಿ ಕೋರ್ಟ್ ಆದೇಶದೊಂದಿಗೆ ಬಂದಿದ್ದರು. ಹಾಗಾಗಿ, ಗ್ರಾಮದ ಎಲ್ಲ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಸಭೆ ನಡೆಸಿ, ಅರ್ಚಕರ ಹೆಣ್ಣು ಮಕ್ಕಳಿಗೆ ದೇವಾಲಯದಲ್ಲಿ ಪೂಜೆ ಮಾಡಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಒಕ್ಕೊರಲಿನಿಂದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಎಂ.ಡಿ.ಬಸವರಾಜು ಮಾತನಾಡಿ, ಸರ್ಕಾರ ಹಾಗೂ ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ಗೌರವ ನೀಡುತ್ತೇವೆ. ದಿ.ತ್ರಿಪುರಾಂತಯ್ಯ ಅವರ ಹೆಣ್ಣು ಮಕ್ಕಳು ಕೋರ್ಟ್ ಆದೇಶದ ಪ್ರಕಾರ ದೇವರ ಪೂಜೆ ನಡೆಸಲು ಬಂದಿದ್ದರೆ. ಇದಕ್ಕೆ ಗ್ರಾಮಸ್ಥರ ವಿರೋಧವಿದೆ. ತ್ರಿಪುರಾಂತಯ್ಯ ಅವರ ಮಗ ಶಿವಕುಮಾರ ಈಗಾಗಲೇ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದು ಅವರು ಮುಂದುವರಿಯಲಿದ್ದಾರೆ. ಅವರು ಪೂಜೆ ಮಾಡಲು ಯಾವುದೇ ತೊಡಕಾಗದಂತೆ ಗ್ರಾಮಸ್ಥರು ಬೆಂಬಲ ನೀಡಲಾಗುವುದು ಎಂದರು.
ಅರ್ಚಕರ ಇಬ್ಬರು ಹೆಣ್ಣು ಮಕ್ಕಳಿಗೆ ಪೂಜೆ ಮಾಡಲು ಈಗ ಅವಕಾಶ ನೀಡಿದರೆ, ಎಲ್ಲ ಅರ್ಚಕರ ಹೆಣ್ಣು ಮಕ್ಕಳಿಗೆ ಅವಕಾಶ ನೀಡಬೇಕಾಗುತ್ತದೆ. ಆಗ ದೇಗುಲದ ಪೂಜಾ ವ್ಯವಸ್ಥೆ ಹದಗೆಡುತ್ತದೆ. ದೇವಸ್ಥಾನದ ವಿಚಾರದಲ್ಲಿ ಗ್ರಾಮಸ್ಥರ ನಿರ್ಧಾರವೇ ಅಂತಿಮ ಎಂದು ಹೇಳಿದರು.
ಇದಕ್ಕೆ ಹೆಣ್ಣು ಮಕ್ಕಳು ಒಪ್ಪಲಿಲ್ಲ. ಕೋರ್ಟ್ ಆದೇಶದಂತೆ ಮೂವರು ಹೆಣ್ಣು ಮಕ್ಕಳು, ನಮ್ಮ ತಾಯಿಗೆ ಪೂಜೆ ಮಾಡಲು ಕೋರ್ಟ್ ಆದೇಶ ನೀಡಿದೆ ಅದರಂತೆ ಪೂಜೆಗೆ ಅವಕಾಶ ನೀಡಲೇ ಬೇಕು. ಕಾನೂನಾತ್ಮಕವಾಗಿ ಹೋರಾಟ ಮಾಡಿ ಹಕ್ಕು ಪಡೆಯುವುದಾಗಿ ಹೇಳಿ ಸಂಧಾನ ಸಭೆಯಿಂದ ಹೊರ ನಡೆದರು.
ಗ್ರಾಪಂ ಅಧ್ಯಕ್ಷ ಲೋಕೇಶ್, ಗ್ರಾಮದ ಮುಖಂಡರಾದ ಗೌಡರ್ ಎಂ.ಪಿ.ನಾಗರಾಜು, ಪಾರುಪತ್ತೇಗಾರ ಎಂ.ಬಿ.ಸಾಗರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ.ಮಹೇಂದ್ರಕುಮಾರ್, ಎಂ.ಆರ್.ಸುಂದರ್, ಎಂ.ಎಂ.ಜಗದೀಶ್, ಸ್ವಾಮಿ, ಎಂ.ಕೆ.ಸಿದ್ದರಾಜು, ಎಂ.ನಾಗರಾಜು, ದೇವಾನಂದ್, ಎಂ.ಎನ್.ಸೋಮಣ್ಣ, ಸತೀಶ್, ನಾಗೇಂದ್ರ, ಜಿ.ಪಿ.ಪುಟ್ಟಮಾದಯ್ಯ, ರಮೇಶ್‌ನಾಯಕ, ಮಹದೇವಯ್ಯ, ಮಹದೇವನಾಯ್ಕ ಇತರರಿದ್ದರು.