ಬೋರಗಾಂವ: ನದಿಯಲ್ಲಿ ಮುಳುಗಿ ಬಾಲಕ ಸಾವು

ಬೋರಗಾಂವ: ಸಮೀಪದ ಸದಲಗಾ ಪಟ್ಟಣದಲ್ಲಿ ದೂಧಗಂಗಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಬೆಳಕಿಗೆ ಬಂದಿದೆ. ಶಾಹೀದ್ ರಿಯಾಜ್ ಅಫರಾಜ(13) ಮೃತ ಬಾಲಕ.

ಪಟ್ಟಣದ ಮಹಾಲಿಂಗ ಸ್ವಾಮಿ ಕನ್ನಡ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಶಾಹೀದ್ ಬೇಸಿಗೆ ರಜೆ ಇದ್ದ ಕಾರಣ ತನ್ನ ತಮ್ಮ ಸುಫಿಯಾ ಜತೆ ಸೇರಿ ನದಿಗೆ ಈಜಲು ಹೋಗಿದ್ದ. ನದಿ ನೀರಿನ ಸೆಳವಿಗೆ ಸಿಲುಕಿ ಶಾಹೀದ್ ನೀರಿನಲ್ಲಿ ಮುಳುಗಿದ್ದಾನೆ. ಸಹೋದರ ಮುಳುಗುವುದನ್ನು ಕಂಡ ಸುಫಿಯಾ ಸಹಾಯಕ್ಕಾಗಿ ಕೂಗಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಶಾಹೀದ್‌ನನ್ನು ಉಳಿಸಲು ಮುಂದಾದರೂ ಪ್ರಯೋಜನವಾಗಿಲ್ಲ. ನೀರಿನ ಹರಿವು ಹೆಚ್ಚಿದಿದ್ದರಿಂದ ಶವ ಪತ್ತೆಯಾಗಲಿಲ್ಲ. ಸದಲಗಾ ಪೊಲೀಸ್ ಉಪನಿರೀಕ್ಷಕ ಅನಿಲಕುಮಾರ ಕುಂಬಾರ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಜತೆ ಶವ ಶೋಧ ಆರಂಭಿಸಿದರು. ರಾತ್ರಿ ಶೋಧ ಕಾರ್ಯ ನಿಲ್ಲಿಸಲಾಗಿತ್ತು.

ಬುಧವಾರ ಬೆಳಗ್ಗೆ ಮತ್ತೆ ಔರವಾಡ ಗ್ರಾಮದ ಆಪ್ತ ಸಹಾಯಕ ದಳದಿಂದ ಮತ್ತೆ ಶೋಧ ಕಾರ್ಯ ಆರಂಭಿಸಲಾಯಿತು. 12 ಗಂಟೆಗೆ ಶವ ಪತ್ತೆಯಾಗಿದೆ. ಸದಲಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.