ವಿಜೃಂಭಣೆಯ ಶ್ರೀ ಗುರುಸಿದ್ದೇಶ್ವರಸ್ವಾಮಿ ರಥೋತ್ಸವ

ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆ ಶ್ರೀ ಗುರುಸಿದ್ದೇಶ್ವರಸ್ವಾಮಿ ದಿವ್ಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ತೇರಿನ ಮಾಳದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಹೊಂಡರಬಾಳು ಪಟ್ಟದ ಮಠದ ನೀಲಕಂಠ ಶಿವಾಚಾರ್ಯ ಮಹಾಸ್ವಾಮೀಜಿ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ರಥದ ಸುತ್ತ ಮೂರು ಸುತ್ತು ಎಡೆತಾಯಿ, ಅರಣ್ಯತಾಯಿ ಮತ್ತು ಶ್ರೀ ಸಿದ್ದೇಶ್ವರ ಸತ್ತಿಗೆ ಹಾಗೂ ಜೋಡಿ ಬಸವನನ್ನು ಪ್ರದಕ್ಷಿಣೆ ಹಾಕಿಸಲಾಯಿತು. ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ರಥೋತ್ಸವಕ್ಕೆ ನೂರಾರು ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.

ಬಳಿಕ ಯುವ ಸಮೂಹ ತೇರನ್ನು ಮಾಳದಿಂದ ಪೂರ್ವ ದಿಕ್ಕಿಗೆ ಎಳೆದರು.ಈ ಸಂದರ್ಭ ಭಕ್ತರು ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು. ಹರಕೆ ಹೊತ್ತ ಭಕ್ತರು ರಥಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಭಾವ ಮೆರೆದರು. ಸಂಜೆ 6 ಗಂಟೆಗೆ ಪೂರ್ವ ಭಾಗದಲ್ಲಿದ್ದ ರಥವನ್ನು ಮತ್ತೆ ಭಕ್ತರು ಪಶ್ಚಿಮದೆಡೆಗೆ ಎಳೆದು ಮೂಲ ಸ್ಥಳಕ್ಕೆ ತಂದು ನಲ್ಲಿಸಿದರು.
ಉರಿ ಬಿಸಿಲನ್ನು ಲೆಕ್ಕಿಸದೆ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹಕ್ಕೆ ಸಾಂಪ್ರದಾಯಿಕ ಕುಟುಂಬಸ್ಥರು ಹೆಸರು ಬೇಳೆ, ಕೋಸಂಬರಿ, ಮಜ್ಜಿಗೆ ಹಾಗೂ ಪಾನಕ ವಿತರಿಸಿದರು.

ಹೆಸರನ್ನಪಾಯಸ: ಗ್ರಾಮದ ಪ್ರತಿ ಮನೆಯಲ್ಲಿ ಹೆಸರನ್ನ ಪಾಯಸವನ್ನು ಸಿದ್ಧಪಡಿಸಲಾಗಿತ್ತು. ರಥೋತ್ಸವ ಮುಕ್ತಾಯಗೊಳ್ಳುತ್ತಿದ್ದಂತೆ ಮನೆಗೆ ಹಿಂದಿರುಗಿದ ಗ್ರಾಮಸ್ಥರು ನೆಂಟರಿಷ್ಟರಿಗೆ ಸಿಹಿ ಊಟ ಬಡಿಸಿದರು.
ರಾತ್ರಿಯಿಡೀ ಉತ್ಸವ, ಜಾತ್ರೆ: ಗುರು ಸಿದ್ದೇಶ್ವರಸ್ವಾಮಿ ರಥೋತ್ಸವ ಆಚರಣೆ ಅಂಗವಾಗಿ ಗ್ರಾಮದಲ್ಲಿ ಗುರುವಾರ ರಾತ್ರಿಯಿಡೀ ಉತ್ಸವ ನಡೆಸಿದರು. ಬಳಿಕ ಶ್ರೀ ಸಿದ್ದೇಶ್ವರಬೆಟ್ಟಕ್ಕೆ ಶ್ರೀಸ್ವಾಮಿಯನ್ನು ಕರೆತರಲಾಯಿತು. ಶುಕ್ರವಾರ ಮುಂಜಾನೆ ಉತ್ಸವ ಮೂರ್ತಿಯನ್ನು ಪಟ್ಟದ ಮುಠದ ನೀಲಕಂಠ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಹೊತ್ತು ತಂದು ಗ್ರಾಮದಲ್ಲಿ ಪುಷ್ಪಾಲಕೃತಗೊಂಡ ರಥದಲ್ಲಿರಿಸಿ ಮಂಗಳವಾಧ್ಯ ಸಮೇತ ವಿಶೇಷ ಪೂಜೆ ಸಲ್ಲಿಸಲಾಯಿತು.

ನಾಡಗೌಡ ಮಹೇಶ್, ಮಹದೇಶ್ವರ ಬೆಟ್ಟ ದೇವಸ್ಥಾನದ ಮಾಜಿ ಧರ್ಮದರ್ಶಿ ಮಲ್ಲೇಗೌಡ, ಯಜಮಾನರಾದ ಮಾದೇಶ್, ಅರಸಶೆಟ್ಟಿ, ಬಸವರಾಜ್ ಅರಸ್, ಗಿರಿಗೌಡ್ರು, ಗುರುಸಿದ್ದಯ್ಯ, ಮೋಹನ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಉಮೇಶ್‌ಅರಸ್, ಎಪಿಎಂಸಿ ನಿರ್ದೇಶಕ ಶಿವಕುಮಾರ್, ನಗರಸಭೆ ಮಾಜಿ ಉಪಾಧ್ಯಕ್ಷ ಜೆ.ಹರ್ಷ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಶಿವಕುಮಾರ್ ಪಾಲ್ಗೊಂಡು ದೇವರ ದರ್ಶನ ಪಡೆದರು.

ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿ.ಸಿ.ವನರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೈಸೂರು, ಬೆಂಗಳೂರು, ತುಮಕೂರು, ತಾಲೂಕಿನ ಮಧುವನಹಳ್ಳಿ, ಸಿದ್ದಯ್ಯನಪುರ, ಲಕ್ಕರಸನಪಾಳ್ಯ, ಕೆಂಪನಪಾಳ್ಯ, ತಿಮ್ಮರಾಜಿಪುರ, ಕಾಮಗೆರೆ, ಸಿಂಗಾನಲ್ಲೂರು ಗ್ರಾಮ ಸೇರಿದಂತೆ ವಿವಿಧ ತಾಲೂಕಿನಿಂದ ಭಕ್ತರು ಆಗಮಿಸಿದ್ದರು.

Leave a Reply

Your email address will not be published. Required fields are marked *