ಹೂವಿನಹಡಗಲಿ: ಪಟ್ಟಣ ಹೊರವಲಯದ ಬಸವರೆಡ್ಡೆಮ್ಮನ ಕೆರೆ ಬಳಿ ಲಾರಿಯಲ್ಲಿ ಸಾಗಿಸುತ್ತಿದ್ದ ಸಿಎನ್‌ಜಿಯ 60 ಟ್ಯಾಂಕ್‌ಗಳ ಪೈಪ್ ಕಟ್ಟಾಗಿ ಗ್ಯಾಸ್ ಸೋರಿಕೆಯಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ.
ತಾಲೂಕಿನ ತಿಪ್ಪಾಪುರ ಗ್ರಾಮದ ಬಳಿ ಇರುವ ಖಾಸಗಿ ಕಂಪನಿಯೊಂದರಿಂದ ಗದಗ ಜಿಲ್ಲೆ ನರಗುಂದ ಪೆಟ್ರೋಲ್ ಬಂಕ್‌ಗೆ ಲಾರಿಯೊಂದು ಸಿಎನ್‌ಜಿ ತುಂಬಿಕೊಂಡು ಸೋಮವಾರ ಸಂಜೆ ಹೊರಟಿರುವಾಗ ಟ್ಯಾಂಕ್‌ಗಳಿಂದ ಸಿಎನ್‌ಜಿ ಸೋರಿಕೆಯಾಗಿದೆ. ಟ್ಯಾಂಕ್‌ಗಳಲ್ಲಿ ಗಾಳಿ ಹೋಗುವ ದೊಡ್ಡ ಶಬ್ದ ಬಂದಿದೆ. ತಕ್ಷಣ ಚಾಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ದಾರಿ ಹೋಕರರಿಗೆ ಗ್ಯಾಸ್ ಲೀಕಾದ ಬಗ್ಗೆ ತಿಳಿಸಿದ್ದಾನೆ. ಇದರಿಂದ ವಾಹನ ಸವಾರರು ಗಾಬರಿಗೊಂಡಿದ್ದಾರೆ.
ಮದಲಗಟ್ಟಿ ಭಾಗಕ್ಕೆ ತೆರಳುವವರು ಕೋಯಿಲಾರಗಟ್ಟಿ ಮಾರ್ಗವಾಗಿ ತೆರಳಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದಾಗ ಲಾರಿಯಲ್ಲಿನ 60 ಟ್ಯಾಂಕ್‌ಗಳ ಗ್ಯಾಸ್ ಸಂಪೂರ್ಣ ಖಾಲಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಲಾರಿ ಚಾಲಕ ಆರೀಫ್, ಅಗ್ನಿಶಾಮ ಸಿಬ್ಬಂದಿ ಸುರೇಶ್, ವಿನಾಯಕ, ಬಸವರಾಜ, ಸಾಹಿಲ್, ರಂಗಣ್ಣ ಇತರರಿದ್ದರು.