ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು ಮತ ಎಣಿಕೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು

ಬೆಳಗಾವಿ: ಲೋಕಸಭೆ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲ ಎರಚುವ ಮೂಲಕ ಗೆಲುವಿನ ಕೇಕೆ ಹಾಕಿದರು. ಮತ್ತೊಂದೆಡೆ ಶಾಸಕರು ಚೌಕಿದಾರ್ ಟೋಪಿ ಹಾಕಿಕೊಂಡು ಡೋಲು ಬಾರಿಸಿ ಸಂಭ್ರಮಿಸಿದರು.

ಬೆಳಗಾವಿ ಟಿಳಕವಾಡಿಯ ಆರ್‌ಪಿಡಿ ಕಾಲೇಜಿನಲ್ಲಿ ಗುರುವಾರ ಬೆಳಗ್ಗೆ 8 ಗಂಟೆಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗುತ್ತಿದ್ದಂತೆ ರಾಮದುರ್ಗ, ಸವದತ್ತಿ, ಗೋಕಾಕ, ಅರಬಾವಿ, ಬೈಲಹೊಂಗಲ ಹಾಗೂ ಬೆಳಗಾವಿ ದಕ್ಷಿಣ, ಉತ್ತರ ಹಾಗೂ ಗ್ರಾಮೀಣ ವಿಧಾನಸಭೆ ಕ್ಷೇತ್ರಗಳಿಂದ ಆಗಮಿಸಿದ್ದ ಸಾವಿರಾರು ಜನರು ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜಮಾಯಿಸಿದರು. ಅತ್ತ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ನಿವಾಸಕ್ಕೆ ಕಾರ್ಯಕರ್ತರು, ಮುಖಂಡರು ತೆರಳಿ ಶುಭಾಯಶ ಕೋರಿದರು.

ದೇಶದ 542 ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಣ್ಣ ಎರಚುತ್ತ ಜೈ ಜೈ ಮೋದಿ ಎಂದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಟಿಳಕವಾಡಿ, ಖಡೇಬಜಾರ್, ಗಣಪತಿ ಗಲ್ಲಿ, ಸದಾಶಿವ ನಗರ, ನೆಹರು ನಗರ, ಮಹಾಂತೇಶ ನಗರ, ರಾಮತೀರ್ಥ ನಗರ, ಉದ್ಯಮಬಾಗ್, ಶಹಾಪುರ, ವಡಗಾವಿ ಪ್ರದೇಶದಲ್ಲಿ ಸ್ಥಳೀಯ ವ್ಯಾಪಾರಿಗಳು, ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಸಿಹಿ ಹಂಚಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಮತ ಎಣಿಕೆಯ ಮೊದಲನೇ ಸುತ್ತಿನಿಂದ 10ನೇ ಸುತ್ತಿನವರೆಗೆ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತ ಗೆಲುವು ಖಚಿತವಾಗುತ್ತಿದ್ದಂತೆ ಸವದತ್ತಿ, ರಾಮದುರ್ಗ, ಗೋಕಾಕ, ಮೂಡಲಗಿ, ಬೈಲಹೊಂಗಲ ಹಾಗೂ ಬೆಳಗಾವಿ ನಗರದ ಪ್ರಮುಖ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.

ಎಣಿಕೆ ಕೇಂದ್ರದಿಂದ ಕಾಂಗ್ರೆಸ್ ದೂರ

ನಗರದ ಆರ್‌ಪಿಡಿ ವೃತ್ತದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಆರಂಭವಾದ ಮೊದಲ ಸುತ್ತಿನಲ್ಲಿಯೇ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸ್ಥಳದಿಂದ ವಾಪಸ್ ಹೋದರು. ಇನ್ನೊಂದಡೆ ಕಾಂಗ್ರೆಸ್ ಶಾಸಕರು, ಮುಖಂಡರು ಮತ ಎಣಿಕೆ ಕೇಂದ್ರದಿಂದ ದೂರ ಉಳಿಯುವ ಮೂಲಕ ಫಲಿತಾಂಶದ ಮುನ್ನವೇ ಸೋಲು ಒಪ್ಪಿಕೊಂಡಿದ್ದರು.

ಹೂವು, ಬಣ್ಣ ಭರ್ಜರಿ ವ್ಯಾಪಾರ

ನಗರದ ಟಿಳಕವಾಡಿಯ ಆರ್‌ಪಿಡಿ ಕಾಲೇಜಿನಲ್ಲಿ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಆರ್‌ಪಿಡಿ ವೃತ್ತದ ಸುತ್ತಮುತ್ತ ರಸ್ತೆ ಬದಿಗಳಲ್ಲಿ ಬಣ್ಣ, ಹೂವಿನ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು. ಮಾರುಕಟ್ಟೆಯಲ್ಲಿ ಕೆಜಿಗೆ 32 ರಿಂದ 40 ರೂ.ಇದ್ದ ಬಣ್ಣ ಆರ್‌ಪಿಡಿ ವೃತ್ತದಲ್ಲಿ ಕೆಜಿಗೆ 65 ರಿಂದ 75 ರೂ.ವರಗೆ ಮಾರಟವಾಯಿತು. ಹೂವಿನ ಮಾಲೆ ಮಾರಾಟದಲ್ಲಿ ದರ ಏರಿಕೆಯಾಗಿತ್ತು. ಆದರೆ, ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಇದ್ದ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದಿಂದ 200 ಮೀಟರ್ ದೂರದಲ್ಲಿ ಹೂವು, ಹಣ್ಣು ಮಾರಾಟ ಹಾಗೂ ಸಂಭ್ರಮಾಚರಣೆ ನಡೆಯಿತು.
ಅಂಗಡಿ-ಮುಂಗಟ್ಟು ಬಂದ್: ಲೋಕಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಆರ್‌ಪಿಡಿ ವೃತ್ತದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದೆಡೆ ಮತದಾನ ಕೇಂದ್ರದ 200 ಮೀಟರ್ ಒಳಗಿನ ಎಲ್ಲ ಅಂಗಡಿ-ಮುಂಗಟ್ಟು ಬಂದ್ ಮಾಡಲಾಗಿತ್ತು. ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆರ್‌ಪಿಡಿ ಕಾಲೇಜು ಮಾರ್ಗದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.

ಎಲ್ಲಡೆ ಮೊಬೈಲ್‌ನಲ್ಲಿಯೇ ಫಲಿತಾಂಶ

ನಗರದ ಬಸ್ ನಿಲ್ದಾಣ, ಹೋಟೆಲ್, ವೃತ್ತಗಳು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಜನರು ತಮ್ಮ ಮೊಬೈಲ್‌ನಲ್ಲಿಯೇ ಲೋಕಸಭೆ ಚುನಾವಣೆ ಫಲಿತಾಂಶ ವಿಕ್ಷಿಸುತ್ತಿದ್ದರು. ಮತ್ತೊಂದಡೆ ಸರ್ಕಾರಿ ಕಚೇರಿಗಳಲ್ಲಿ, ಕೋರ್ಟ್ ಆವರಣದಲ್ಲಿ ದಿನ ನಿತ್ಯದ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಎಲ್ಲರೂ ಲೋಕಸಭೆ ಚುನಾವಣೆ ಫಲಿತಾಂಶ ನೋಡುತ್ತ ಖುಷಿ ಪಡುತ್ತಿರುವುದು ಕಂಡುಬಂತು.

ಫಲಿತಾಂಶಕ್ಕಾಗಿ ಸ್ಕ್ರೀನ್ ಸೌಲಭ್ಯ

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ ಪಾಟೀಲ ತಮ್ಮ ಪಿಬಿ ರಸ್ತೆಯಲ್ಲಿರುವ ಕಚೇರಿ ಆವರಣದಲ್ಲಿಯೇ ಲೋಕಸಭೆ ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಮಾಹಿತಿಗಾಗಿ ಲೈವ್ ಸ್ಕ್ರೀನ್ ಸೌಲಭ್ಯ ಕಲ್ಪಿಸಿದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಪಟಾಕಿ ಸಿಡಿಸುತ್ತಿದ್ದರು. ಇತ್ತ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಬಿಜೆಪಿ ಮುಖಂಡ ಈರಣ್ಣ ಕಡಾಡಿ, ಎಂ.ಬಿ.ಝರಲಿ ಅವರು ಚೌಕಿದಾರ್ ಟೋಪಿ ಹಾಕಿಕೊಂಡು ಡೋಲು ಬಾರಿಸಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *