ಕೊಲಂಬೊ: ವೇಗಿ ಮೊಹಮದ್ ಸಿರಾಜ್ (21ಕ್ಕೆ 6) ಪ್ರಚಂಡ ಬೌಲಿಂಗ್ ನಿರ್ವಹಣೆಯ ಲವಾಗಿ ಟೀಮ್ ಇಂಡಿಯಾ, 16ನೇ ಆವೃತ್ತಿಯ ಏಷ್ಯಾಕಪ್ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ನಡೆದ ೈನಲ್ ಪಂದ್ಯದಲ್ಲಿ ಜಂಟಿ ಆತಿಥೇಯ ಶ್ರೀಲಂಕಾ ಎದುರು 10 ವಿಕೆಟ್‌ಗಳಿಂದ ಏಕಪಕ್ಷೀಯ ಗೆಲುವು ದಾಖಲಿಸಿದ ರೋಹಿತ್ ಶರ್ಮ ಬಳಗ 8ನೇ ಬಾರಿಗೆ ಏಷ್ಯಾದ ಕ್ರಿಕೆಟ್ ಸಾಮ್ರಾಟ ಎನಿಸಿದೆ. ಈ ಮೂಲಕ ಭಾರತ ತಂಡ 1,185 ದಿನಗಳ ಬಳಿಕ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದಂತಾಗಿದ್ದು, ಮುಂಬರುವ ತವರಿನ ಏಕದಿನ ವಿಶ್ವಕಪ್‌ಗೆ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ ನಾಯಕ ದಸುನ್ ಶನಕ ನಿರ್ಧಾರ ಭಾರತಕ್ಕೆ ಭರ್ಜರಿ ಲಾಭ ತಂದುಕೊಟ್ಟಿತು. ಮಳೆಯಿಂದಾಗಿ 40 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮೊಹಮದ್ ಸಿರಾಜ್ ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಲಂಕಾ ದಿಕ್ಕೆಡುವಂತೆ ಮಾಡಿದರು. ಜತೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (3ಕ್ಕೆ 3) ನೀಡಿದ ಸಾಥ್‌ನಿಂದ ಸಿರಾಜ್, ಶ್ರೀಲಂಕಾ ತಂಡವನ್ನು 15.1 ಓವರ್‌ಗಳಲ್ಲೇ ಕೇವಲ 50 ರನ್‌ಗಳಿಗೆ ಕಟ್ಟಿಹಾಕಿದರು. ಪ್ರತಿಯಾಗಿ ಶುಭಮಾನ್ ಗಿಲ್ (27*) ಹಾಗೂ ಇಶಾನ್ ಕಿಶನ್ (23*) ಅಜೇಯ ಜತೆಯಾಟದ ನೆರವಿನಿಂದ ಭಾರತ, 6.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಸರಾಗವಾಗಿ ಜಯ ಒಲಿಸಿಕೊಂಡಿತು.
*8: ಭಾರತ ತಂಡ ಏಕದಿನ ಮಾದರಿಯಲ್ಲಿ 7ನೇ (1984, 1988, 1990-91, 1995, 2010, 2018, 2023) ಮತ್ತು ಒಟ್ಟಾರೆ 8ನೇ ಬಾರಿ (2016ರಲ್ಲಿ ಟಿ20 ಮಾದರಿ) ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿತು.
https://x.com/Cricketracker/status/1703434401185673421?s=20
ಸಿರಾಜ್ ಮ್ಯಾಜಿಕ್ ಸ್ಪೆಲ್: ಪಂದ್ಯದ ಮೊದಲ ಓವರ್‌ನಲ್ಲಿ ಲಂಕಾದ ಕುಸಲ್ ಪೆರೇರಾ (0) ವಿಕೆಟ್ ಕಬಳಿಸಿ ವೇಗಿ ಜಸ್‌ಪ್ರೀತ್ ಬುಮ್ರಾ ಆರಂಭಿಕ ಆಘಾತ ನೀಡಿದರು. ಬಳಿಕ ಮೊಹಮದ್ ಸಿರಾಜ್ ಒಂದೇ ಓವರ್‌ನಲ್ಲಿ 4 ವಿಕೆಟ್ ಕಬಳಿಸಿ ಲಂಕಾಗೆ ಮರ್ಮಾಘಾತ ನೀಡುವುದರೊಂದಿಗೆ ಪಂದ್ಯದ 4ನೇ ಓವರ್‌ನಲ್ಲೇ ಭಾರತದ ಏಷ್ಯಾಕಪ್ ಗೆಲುವು ಬಹುತೇಕ ಖಚಿತವೆನಿಸಿತು! ಪಂದ್ಯದಲ್ಲಿ ತಾನೆಸೆದ ಮೊದಲ ಓವರ್‌ನಲ್ಲಿ ಮೇಡನ್ ಸಾಧಿಸಿದ ಸಿರಾಜ್, ತನ್ನ 2ನೇ ಓವರ್‌ನ ಮೊದಲ ಎಸೆತದಲ್ಲಿ ಪಥುಮ್ ನಿಸ್ಸಂಕಾ (2) ವಿಕೆಟ್ ಕಬಳಿಸಿದರು. ನಿಸ್ಸಂಕಾ ಸ್ಕೈರ್‌ನಲ್ಲಿದ್ದ ರವೀಂದ್ರ ಜಡೇಜಾಗೆ ಕ್ಯಾಚಿತ್ತರು. 3ನೇ ಎಸೆತದಲ್ಲಿ ಸಧೀರ ಸಮರವಿಕ್ರಮ (0) ಎಲ್‌ಬಿ ಬಲೆಗೆ ಬಿದ್ದರು. ಡಿಆರ್‌ಎಸ್ ಮೊರೆ ಹೋದರೂ ಸಮರವಿಕ್ರಮ ಬಚಾವ್ ಆಗಲಿಲ್ಲ. ಬೆನ್ನಲ್ಲೇ, ಪಾಕ್ ವಿರುದ್ಧ ಪಂದ್ಯದಲ್ಲಿ ಲಂಕಾ ಗೆಲುವಿನ ರೂವಾರಿ ಎನಿಸಿ ೈನಲ್‌ಗೇರಲು ನೆರವಾಗಿದ್ದ ಎಡಗೈ ಬ್ಯಾಟರ್ ಚರಿತ್ ಅಸಲಂಕಾ (0) ಎದುರಿಸಿದ ಮೊದಲ ಎಸೆತದಲ್ಲೇ ಕವರ್‌ನಲ್ಲಿದ್ದ ಇಶಾನ್ ಕಿಶನ್‌ಗೆ ಕ್ಯಾಚ್ ನೀಡಿದರು. ಹ್ಯಾಟ್ರಿಕ್ ಅವಕಾಶವಿದ್ದ 5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಧನಂಜಯ ಡಿ ಸಿಲ್ವ (4) ಆ ಓವರ್‌ನ ಕೊನೇ ಎಸೆತದಲ್ಲಿ ಕೀಪರ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಲಂಕಾ ಕೇವಲ 12 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ತತ್ತರಿಸಿತು. ತನ್ನ ಮರುಓವರ್ ಮತ್ತು ಪಂದ್ಯದ ಆರನೇ ಓವರ್‌ನಲ್ಲಿ ಮತ್ತೆ ನಾಯಕ ದಸುನ್ ಶನಕ (0) ಅವರನ್ನು ಆ್ ಸ್ಟಂಪ್‌ನ ಬೇಲ್ಸ್ ಎಗರಿಸಿ ಬೌಲ್ಡ್ ಮಾಡಿದ ಸಿರಾಜ್ 16 ಎಸೆತಗಳಲ್ಲೇ 5 ವಿಕೆಟ್ ಗೊಂಚಲು ಪೂರ್ಣಗೊಳಿಸಿದರು. ಇದರಿಂದ ಲಂಕಾ ಇನ್ನಷ್ಟು ಶೋಚನಿಯ ಸ್ಥಿತಿ (12ಕ್ಕೆ 6) ತಲುಪಿತು. ನಂತರ ಕುಸಲ್ ಮೆಂಡಿಸ್ (17) ಹಾಗೂ ದುನಿತ್ ವೆಲ್ಲಲಾಗೆ (8) ಏಳನೇ ವಿಕೆಟ್‌ಗೆ 21 ರನ್ ಪೇರಿಸಿದ್ದು ಲಂಕಾ ಪರ ದಾಖಲಾದ ಗರಿಷ್ಠ ರನ್ ಜತೆಯಾಟ ಎನಿಸಿತು. ಪಂದ್ಯದ 12ನೇ ಓವರ್‌ನಲ್ಲಿ ಕುಸಲ್ ಮೆಂಡಿಸ್ ಮಿಡಲ್ ಸ್ಟಂಪ್ ಬೇಲ್ಸ್ ಎಗರಿಸಿದ ಸಿರಾಜ್ ಇವರಿಬ್ಬರ ಜತೆಯಾಟಕ್ಕೂ ತೆರೆ ಎಳೆದರು.
https://x.com/BCCI/status/1703414823349084362?s=20
ಸಾಥ್ ನೀಡಿದ ಹಾರ್ದಿಕ್: ಸಿರಾಜ್‌ಗೆ ಸಮರ್ಥ ಸಾಥ್ ನೀಡಿದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೊನೇ 3 ವಿಕೆಟ್ ಕಬಳಿಸಿ ಲಂಕಾ ಇನಿಂಗ್ಸ್‌ಗೆ ಬೇಗನೆ ತೆರೆ ಎಳೆದರು. ಹಾರ್ದಿಕ್ ಬೌನ್ಸರ್‌ಗೆ ಬೆಂಡಾದ ದುನಿತ್ ವೆಲ್ಲಲಾಗೆ ಪೆವಿಲಿಯನ್ ಹಾದಿ ಹಿಡಿದರೆ, ಬಾಲಗೋಂಚಿಗಳಾದ ಪ್ರಮೋದ್ ಮಧುಶಾನ್ (1) ಹಾಗೂ ಮಥೀಶ ಪಥಿರಣ (0) ಸತತ 2 ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಇನಿಂಗ್ಸ್‌ನ ಎಲ್ಲ ವಿಕೆಟ್‌ಗಳು ಭಾರತೀಯ ವೇಗಿಗಳ ಪಾಲಾದರೆ, ಟೂರ್ನಿಯ ಲೀಗ್ ಮತ್ತು ಸೂಪರ್-4 ಹಂತದಲ್ಲಿ ಭಾರತಕ್ಕೆ ಬಲ ತುಂಬಿದ್ದ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಕೇವಲ 1 ಓವರ್ ಎಸೆಯುವ ಅವಕಾಶವಷ್ಟೇ ಲಭಿಸಿತು.