ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಹುಕ್ಕೇರಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹುಕ್ಕೇರಿ ತಾಲೂಕಿನ ಕೀರ್ತಿಯನ್ನು ನಮ್ಮ ಮಕ್ಕಳು ಹೆಚ್ಚಿಸಿದ್ದಾರೆ ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ.

ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, 2018-19 ನೇ ಸಾಲಿನಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಸ್ಪರ್ಧೆ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ತಾಲೂಕಿನ 832 ವಿದ್ಯಾರ್ಥಿಗಳಲ್ಲಿ 140 ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ. ಆಯ್ಕೆಯಾದ ಮಕ್ಕಳಿಗೆ 9 ನೇ ತರಗತಿಯಿಂದ ಪಿಯುಸಿವರೆಗೆ ಪ್ರತಿ ತಿಂಗಳು 1000 ರೂ. ಶಿಷ್ಯವೇತನ ನೀಡಲಾಗುತ್ತದೆ ಎಂದರು.

ಶಾಸಕ ಉಮೇಶ ಕತ್ತಿ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಲಿತಾಂಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು. ಕ್ಷೇತ್ರ ಸಮನ್ವಯಾಕಾರಿ ಎಸ್.ಡಿ.ನಾಯಿಕ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಅರಿಹಂತ ಬಿರಾದಾರಪಾಟೀಲ, ಸುನೀಲ ಕಾಜಗಾರ, ಸುನೀಲ ಖೋತ ಮತ್ತಿತರರಿದ್ದರು.

ನಿಡಸೋಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶ್ರೀಧರ ಶಿವಲಿಂಗ ಢಾಂಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ. ಡಿಡಿಪಿಐ ಎಂ.ಜಿ.ದಾಸರ, ಡೈಟ್ ಪ್ರಾಂಶುಪಾಲ ಮೋಹನ ಜೀರಗಿಹಾಳ ಮಾರ್ಗದರ್ಶನದಲ್ಲಿ ಬಿ.ಇ.ಒ ಮೋಹನ ದಂಡಿನ ಅವರು ಹಮ್ಮಿಕೊಂಡ ವಿನೂತನ ಯೋಜನೆಗಳು ಮತ್ತು ಶಿಕ್ಷಕರ ಶ್ರಮದಿಂದ ಸಾಧನೆ ಸಾಧ್ಯವಾಗಿದೆ. ಸಾಮಾನ್ಯ ವರ್ಗದಿಂದ 8, ಎಸ್‌ಸಿ31, ಎಸ್‌ಟಿ 11, ಇತರೆ ವರ್ಗದಿಂದ 90 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ತಾಲೂಕಿನ ಶಿರಗಾಂವ ಸರ್ಕಾರಿ ಪ್ರೌಢಶಾಲೆಯ 10 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಥಮ ಹಾಗೂ ಎಲಿಮುನ್ನೋಳಿಯ ಸರ್ಕಾರಿ ಪ್ರೌಢಶಾಲೆಯ 9 ವಿದ್ಯಾರ್ಥಿಗಳು ಆಯ್ಕೆಯಾಗಿ ದ್ವಿತೀಯ ಹಾಗೂ ಸರ್ಕಾರಿ ಪ್ರೌಢಶಾಲೆ ಅರ್ಜುನವಾಡದ 7 ವಿದ್ಯಾರ್ಥಿಗಳು ಆಯ್ಕೆಯಾಗಿ ತೃತೀಯ ಸ್ಥಾನ ಪಡೆದಿದ್ದಾರೆ.