ಕಾಂಗ್ರೆಸ್‌ನಲ್ಲಿ ಭಿನ್ನಮತ ಇದ್ದರೂ ಒಗ್ಗಟ್ಟಿದೆ

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸುತ್ತೇವೆ. ಚುನಾವಣೆ ಸಮಯದಲ್ಲಿ ಭಿನ್ನಮತ ಸಾಮಾನ್ಯವಾಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಬುಧವಾರ ಮಾತನಾಡಿ, ನನ್ನ ಸಹೋದರ ಹಾಗೂ ಗೋಕಾಕ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಪಕ್ಷದ ಚಿಹ್ನೆಯ ಮೇಲೆ ಶಾಸಕರಾಗಿರುವ ಅವರು ಪಕ್ಷದ ಪರ ಕೆಲಸ ಮಾಡುವುದು ಕರ್ತವ್ಯ. ಶಾಸಕರು ನನ್ನ ಮಾತು ಕೇಳಬೇಕು ಅಂತಿಲ್ಲ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಶ್ರಮ ವಹಿಸಲಿದ್ದಾರೆ ಎಂದರು.

ಬೆಳಗಾವಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಸಾಧುನವರ ಬೈಲಹೊಂಗಲಕ್ಕೆ ಮಾತ್ರ ಸೀಮಿತ ವ್ಯಕ್ತಿ ಅಲ್ಲ. ಅವರು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸಿದ್ದಾರೆ. ಇದೀಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಎಲ್ಲ ಕಡೆ ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠ ಕಾರ್ಯಕರ್ತರ ಪಡೆ ಹೊಂದಿದೆ. ಚುನಾವಣೆ ಪಕ್ಷದ ಮೇಲೆ ನಡೆಯುತ್ತದೆ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ನಡೆಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್.ಕೆ.ಪಾಟೀಲ, ಇಬ್ರಾಹಿಂ ಒಳಗೊಂಡು ಪಕ್ಷದ ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ. ಲೋಕಸಭೆ ಕ್ಷೇತ್ರಗಳಲ್ಲಿ ಮತ ಬ್ಯಾಂಕ್ ಇದೆ ಎಂದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯ ಪರಶುರಾಮ ವಗ್ಗಣ್ಣವರ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಯುವರಾಜ ಕದಂ ಇನ್ನಿತರರು ಇದ್ದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ- ಸಿದ್ನಾಳ್

ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಮ್ಮ ಮತ್ತು ವಿ.ಎಸ್.ಸಾಧುನವರ ನಡುವೆ ಪೈಪೋಟಿ ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ಹೈಕಮಾಂಡ್ ಸಾಧುನವರ್‌ಗೆ ಟಿಕೆಟ್ ನೀಡಿದ್ದು ಸ್ವಾಗತಾರ್ಹವಾಗಿದೆ. ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನ ಇಲ್ಲ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದು, ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶಿವಕಾಂತ ಸಿದ್ನಾಳ್ ತಿಳಿಸಿದ್ದಾರೆ.

ಶಾಸಕಿ ಹೆಬ್ಬಾಳ್ಕರ್ ಮೌನ ಅಭ್ಯರ್ಥಿಗೆ ಆತಂಕ

ಬೆಳಗಾವಿ ಜಿಲ್ಲಾ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮತ್ತು ಪಕ್ಷದ ಕೆಲ ನಿರ್ಧಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಚಿವ ಸತೀಶ ಜಾರಕಿಹೊಳಿ ನಡುವಿನ ಮುನಿಸು ಮುಂದುವರಿದಿದೆ. ಬುಧವಾರ ಪಕ್ಷದ ಕಚೇರಿಯಲ್ಲಿ ಹೈಕಮಾಂಡ್ ಯೋಜನೆ ಮತ್ತು ಟಿಕೆಟ್ ಹಂಚಿಕೆ ಕುರಿತು ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಸಚಿವರು ಮತ್ತು ಶಾಸಕಿ ಅಕ್ಕಪಕ್ಕದಲ್ಲಿ ಕುಳಿತುಕೊಂಡಿದ್ದರಾದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಅಷ್ಟೇ ಅಲ್ಲದೆ ಸುದ್ದಿಗೋಷ್ಠಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡದೆ ಮೌನ ವಹಿಸಿರುವುದು ಅಭ್ಯರ್ಥಿ ವಿ.ಎಸ್.ಸಾಧುನವರ ಅವರಿಗೆ ಮತ್ತಷ್ಟು ಆತಂಕ ಉಂಟು ಮಾಡಿದೆ.

ದೇಶದ ಶೇ. 20 ರಷ್ಟು ಕುಟುಂಬಗಳಿಗೆ ಮಾಸಿಕ 6,000 ರೂ.ದಂತೆ ವಾರ್ಷಿಕ 76 ಸಾವಿರ ರೂ. ಭದ್ರತಾ ಹಣ ಕೊಡುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ.

ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ