ಉತ್ತಮ ಚಿಕಿತ್ಸೆ ದೃಷ್ಟಿಯಿಂದ ಒಪ್ಪಂದ ಅಗತ್ಯ

ಮೈಸೂರು: ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆಯೊಂದಿಗೆ ಸಂಶೋಧನೆಗಳ ಮೂಲಕ ಜೀವನ ಸುಧಾರಣೆಯಾಗಬೇಕೆಂಬ ಉದ್ದೇಶದಿಂದ ವಿವಿಧ ಸಂಘ-ಸಂಸ್ಥೆ ಹಾಗೂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿದೆ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಬಿ.ಸುರೇಶ್ ಅಭಿಪ್ರಾಯಪಟ್ಟರು.


ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮತ್ತು ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ನಡುವಿನ ಸಂಶೋಧನಾ ಸಹಯೋಗ ಒಪ್ಪಂದದ ನವೀಕರಣಕ್ಕೆ ಸಂಬಂಧಿಸಿದಂತೆ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಬೋರ್ಡ್ ರೂಮ್‌ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.


ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 5 ವರ್ಷದ ಅವಧಿಯಲ್ಲಿ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಸಹಯೋಗದಲ್ಲಿ ಅಕಾಡೆಮಿಯು 12 ಅಧ್ಯಯನಗಳ ಕುರಿತಂತೆ 1.2 ಕೋಟಿ ರೂ.ವೆಚ್ಚದಲ್ಲಿ ಅತ್ಯುತ್ತಮವಾಗಿ ಸಂಶೋಧನೆ ನಡೆಸಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಕಂಪನಿ ನೀಡಿದೆ. ಆರೋಗ್ಯ ಕ್ಷೇತ್ರದಲ್ಲಿ ವಿವಿಧ ರೋಗಗಳಿಗೆ ಸಂಬಂಧಿಸಿಂತೆ ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದು, ಅದಕ್ಕೆ ಕೆಲವು ಸಂಘ-ಸಂಸ್ಥೆ, ಕಂಪನಿಗಳ ಸಹಕಾರವೂ ಅಗತ್ಯವಿದೆ. ಇಂತಹ ಸಂಶೋಧನೆಗಳಿಂದಾಗಿಯೇ ಅಕಾಡೆಮಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪ್ 500 ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಸಂಶೋಧನಾ ಸಹಯೋಗ ಒಪ್ಪಂದ ಹೀಗೆ ಮುಂದುವರಿಯಲಿದೆ ಎಂದರು.


ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ಡಾ.ಕುಮಾರ ಸಂಜಯ ಮಾತನಾಡಿ, ಎರಡು ಸಂಸ್ಥೆಗಳ ನಡುವಿನ ಈ ಒಪ್ಪಂದದಿಂ ದಾಗಿ ಕಂಪನಿಯು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನವೀನ ರೀತಿಯ ಉತ್ಪನ್ನಗಳನ್ನು ತಯಾರಿಸಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ ಎಂದರು.


2014 ರಿಂದ 5 ವರ್ಷಗಳ ಅವಧಿಗೆ ಮಾಡಿಕೊಂಡಿದ್ದ ಸಂಶೋಧನಾ ಸಹಯೋಗ ಒಪ್ಪಂದವನ್ನು ಮತ್ತೆ ಮುಂದಿನ ಐದು ವರ್ಷಕ್ಕೆ ಮುಂದುವರಿಸಲಾಯಿತು.


ಸಭೆಯಲ್ಲಿ ಕುಲಸಚಿವ ಡಾ.ಬಿ.ಮಂಜುನಾಥ್, ಅಕಾಡೆಮಿ ನಿರ್ದೇಶಕ ಡಾ.ಪಿ.ಎ.ಕುಶಾಲಪ್ಪ, ಕಂಪನಿಯ ಕ್ಲಸ್ಟರ್ ಮ್ಯಾನೇಜರ್ ಡಾ.ಶ್ರುತಿನ್ ಉಲ್ಮಾನ್, ಕ್ವಾಲಿಟಿ ಮತ್ತು ರಿಸರ್ಚ್ ಮ್ಯಾನೇಜರ್ ಜಗದೀಶ್ ಪಂಪಾಪತಿ ಇತರರು ಹಾಜರಿದ್ದರು.