ಮ್ಯಾಜಿಕ್ ನಂಬರ್: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಮುನ್ನಡೆ

ನವದೆಹಲಿ: ಒಂದೆಡೆ ಮೋದಿ ಜನಪ್ರಿಯತೆಯನ್ನು ಓರೆಗೆ ಹಚ್ಚಲಿರುವ ಲೋಕಸಭಾ ಚುನಾವಣೆಗೂ ಮುನ್ನವೇ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯು ಭಾರಿ ಮಹತ್ವ ಪಡೆದುಕೊಂಡಿದ್ದು, ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಬಿಜೆಪಿಯನ್ನು ಹಿಂದಿಕ್ಕಿದೆ.

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿದ್ದು, ಬಹುತೇಕ ಸರ್ಕಾರ ರಚನೆಯತ್ತ ದಾಪುಗಾಲು ಇಟ್ಟಿದೆ.
ಉಳಿದಂತೆ ತೆಲಂಗಾಣದಲ್ಲಿ ಕೆ. ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಪಕ್ಷ ಈಗಾಗಲೇ ಮ್ಯಾಜಿಕ್‌ ನಂಬರ್‌ 60ರ ಗಡಿ ದಾಟಿ 85 ಸ್ಥಾನ ಪಡೆದಿದೆ.

ಕಾಂಗ್ರೆಸ್‌ 22 ಸೀಟುಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಮಿಜೋರಾಂನಲ್ಲಿ ಮ್ಯಾಜಿಕ್‌ ನಂಬರ್‌ 21 ಆಗಿದ್ದು, ಎಂಎನ್‌ಎಫ್‌ 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬಹುತೇಕ ಸರ್ಕಾರ ರಚನೆ ಖಾತ್ರಿಗೊಂಡಿದೆ.

ಇನ್ನು 46 ಮ್ಯಾಜಿಕ್‌ ನಂಬರ್‌ ಇರುವ ಛತ್ತೀಸ್‌ಗಢದಲ್ಲಿಯೂ ಕಾಂಗ್ರೆಸ್‌ ಈಗಾಗಲೇ 53 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಕಳೆದ ಬಾರಿಗಿಂತಲೂ ಈ ಬಾರಿ 16 ಕ್ಷೇತ್ರಗಳಲ್ಲಿ ಹೆಚ್ಚುವರಿ ಗೆಲುವು ಸಾಧಿಸಿದೆ.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ 103 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಮ್ಯಾಜಿಕ್‌ ನಂಬರ್‌ 116ರ ಸನಿಹದಲ್ಲಿದ್ದರೆ, ಬಿಜೆಪಿ 94 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅದರಂತೆ ರಾಜಸ್ಥಾನದಲ್ಲಿ 99 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಕಾಂಗ್ರೆಸ್‌ 100ರ ಮ್ಯಾಜಿಕ್‌ ನಂಬರ್‌ನತ್ತ ದಾಪುಗಾಲಿಟ್ಟಿದ್ದರೆ, ಬಿಜೆಪಿ 76 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್)