ಹೂವಿನಹಡಗಲಿ: ವಿಜಯದಶಮಿ ಅಂಗವಾಗಿ ಶನಿವಾರ ಹಾಗೂ ಭಾನುವಾರ ತಾಲೂಕಿನ ಸುಕ್ಷೇತ್ರ ಮೈಲಾರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಲು ಜರುಗಿದವು.
ಶನಿವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ ಸ್ವಾಮಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು. ನಂತರ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಭಕ್ತರು ಬನ್ನಿ ಪತ್ರಿಯನ್ನು ಸ್ವಾಮಿಗೆ ಸಮರ್ಪಿಸಿದರು.
ಭಾನುವಾರ ಬೆಳಗಿನ ಜಾವ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಗಂಗೆಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದಲ್ಲಿ ಭಕ್ತರು ಹರಕೆ ತೀರಿಸಿದರು. ಕುದುರೆಕಾರರು ಹಾಗೂ ಗೊರವಪ್ಪಗಳು ಸೇವೆ ಸಲ್ಲಿಸಿದರು.
ಭಕ್ತರು ಸ್ವಾಮಿಗೆ ಪಂಚಾಮೃತ ನೈವೇದ್ಯ ನೀಡಿದರು. ದೂರದ ಊರಗಳಿಂದ ಆಗಮಿಸಿದ್ದ ಭಕ್ತರು ಶನಿವಾರ ರಾತ್ರಿ ತಂದಿದ್ದ ಬುತ್ತಿಯನ್ನು ವಿನಿಮಯ ಮಾಡಿಕೊಂಡು ಸೇವಿಸಿದರು.