ನನ್ನ ಕ್ಷೇತ್ರದಲ್ಲಿ ಜೆಡಿಎಸ್​ ಜತೆಗಿನ ಹೊಂದಾಣಿಕೆ ಸರಿಹೋಗಲಿಲ್ಲ: ವೀರಪ್ಪ ಮೊಯ್ಲಿ ಬೇಸರ

ಬೆಂಗಳೂರು: ಲೋಕಸಭೆ ಫಲಿತಾಂಶ ಕುರಿತು ಪರಾಮರ್ಶೆ ಮಾಡುತ್ತೇವೆ. ಮೈತ್ರಿಯೂ ಸರ್ಕಾರದ ಮಟ್ಟದಲ್ಲಿ ಆಗಿತ್ತು. ಆದರೆ ತಳಮಟ್ಟದಲ್ಲಿ ಹೊಂದಾಣಿಕೆ ಆಗಲಿಲ್ಲ. ನನ್ನ ಕ್ಷೇತ್ರದಲ್ಲಿ ಜೆಡಿಎಸ್​ ಜತೆಗಿನ ಹೊಂದಾಣಿಕೆ ಸರಿಹೋಗಲಿಲ್ಲ ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೈತ್ರಿ ವೇಳೆ ತಳಮಟ್ಟದಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ. ಈ ಜವಾಬ್ದಾರಿಯನ್ನು ಸರಿಯಾಗಿ‌ ನಿರ್ವಹಿಸಬೇಕಿತ್ತು. ಎರಡೂ ಪಕ್ಷಗಳ ನಾಯಕರು ಹೊಂದಾಣಿಕೆ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ. ಸೂಕ್ತ ಹೊಂದಾಣಿಕೆ ಇದ್ದಿದ್ದರೆ ಇಂತಹ ಫಲಿತಾಂಶ ಬರುತ್ತಿರಲಿಲ್ಲ. ಸಮನ್ವಯತೆಯ ಕೊರತೆಯೇ ಈ ಫಲಿತಾಂಶಕ್ಕೆ ಕಾರಣ ಎಂದರು.

ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ ಮೈತ್ರಿ ಇರಬೇಕು. ಲೋಪದೋಷಗಳಿದ್ದರೆ ಸರಿಪಡಿಸಿಕೊಂಡು ಮುನ್ನಡೆಸಬೇಕು ಎಂದು ಸಲಹೆ ನೀಡಿದ ಅವರು, ಬಿ.ಎಸ್​.ಯಡಿಯೂರಪ್ಪನವರ ಅಸ್ತಿತ್ವ ಇರುವುದೇ ಆಪರೇಷನ್ ಕಮಲದಲ್ಲಿ. ಅದಕ್ಕಾಗಿಯೇ ಬಿಎಸ್​ವೈ ಯಾವಾಗಲೂ ಆಪರೇಷನ್ ಕಮಲ ಎನ್ನುತ್ತಿರುತ್ತಾರೆ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *