ಸಂಸತ್​ ಕೊನೆ ಭಾಷಣದಲ್ಲಿ ಮೋದಿಯದ್ದು ಅದೇ ಅಭಿಮಾನ, ಆತ್ಮವಿಶ್ವಾಸ

ನವದೆಹಲಿ: ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಇಂದು 16ನೇ ಲೋಕಸಭೆಯ ಸಮಾರೋಪ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಸಾಧನೆಯ ಗಂಟು ಬಿಚ್ಚುವುದರ ಜತೆಗೆ ಮುಂಬರುವ ಲೋಕಸಭೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಅಚಲ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಸ್ಪೀಕರ್​ಗೆ ಧನ್ಯವಾದ ತಿಳಿಸಿದ ಮೋದಿ, ತಮ್ಮ ಸರ್ಕಾರ ಎರಡನೇ ಬಾರಿಗೆ ಆಯ್ಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನಡೆಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ನಾನು ಈ ಸದನಕ್ಕೆ ಮೊದಲ ಬಾರಿಗೆ ಬಂದೆ ಮತ್ತು ಹಲವು ಹೊಸ ವಿಷಯಗಳನ್ನು ತಿಳಿದುಕೊಂಡೆ. ಅಪ್ಪಿಕೊಳ್ಳುವುದು ಮತ್ತು ಬಲವಂತವಾಗಿ ಅಪ್ಪಿಕೊಳ್ಳುವುದರ ವ್ಯತ್ಯಾಸ ಏನೆಂದು ನನಗೆ ಮೊದಲ ಬಾರಿ ಸಂಸತ್ತಿನಲ್ಲಿಯೇ ತಿಳಿಯಿತು ಎಂದು ಪರೋಕ್ಷವಾಗಿ ರಾಹುಲ್‌ ಅವರ ನಡೆಯನ್ನು ಕುಟುಕಿದರು.

ಈ ಸದನವು 1,400ಕ್ಕೂ ಅಧಿಕ ಕಾನೂನುಗಳನ್ನು ತೆಗೆದು ಹಾಕಿದೆ. ಹಲವು ಕಾನೂನುಗಳೊಂದಿಗೆ ಕಾಡಿನ ಪರಿಸ್ಥಿತಿ ಎದುರಾಗಿತ್ತು. ಇದೊಂದು ಶುಭಸೂಚಕವಾಗಿದ್ದು, ಮಾಡಲು ಇನ್ನು ಬಾಕಿ ಇದೆ. ಮುಲಾಯಂ ಜೀ ಈಗಾಗಲೇ ಆಶೀರ್ವಾದ ಮಾಡಿದ್ದಾರೆ ಎಂದರು.

ಪೂರ್ಣಾವಧಿ ಆಡಳಿತ ಸಂತಸ ತಂದಿದೆ

16ನೇ ಲೋಕಸಭೆಗೆ ವಿದಾಯ ಹೇಳುತ್ತಿದ್ದೇನೆ. ಕಾಂಗ್ರೆಸ್​ ಹೊರತುಪಡಿಸಿ ಕೇಂದ್ರದಲ್ಲಿ 30 ವರ್ಷಗಳ ಬಳಿಕ ಪೂರ್ಣ ಬಹುಮತದೊಂದಿಗೆ ಪೂರ್ಣಾವಧಿ ಆಡಳಿತ ನಡೆಸಿದ್ದಕ್ಕೆ ಸಂತಸವಾಗಿದೆ. ನಾನಿಲ್ಲಿ ಸರ್ಕಾರದ ಸಾಧನೆ ಹೇಳಲು ನಿಂತಿದ್ದೇನೆ. ಸದನದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ಸಮರ್ಪಿಸುವೆ ಎಂದರು.

ಈ ಲೋಕಸಭೆಯಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಯಲು ಕಠಿಣ ಕಾನೂನುಗಳನ್ನು ಜಾರಿಗೆ ತರಲಾಗಿದೆ. ವಿಶ್ವವು ಜಾಗತಿಕ ತಾಪಮಾನ ಏರಿಕೆ ಕುರಿತು ಚರ್ಚಿಸುತ್ತಿದ್ದು, ಇದಕ್ಕಾಗಿ ಭಾರತವು ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟವನ್ನು ರಚಿಸಿದೆ. ಈಗ ಭಾರತದ ಆತ್ಮವಿಶ್ವಾಸವು ಸಾರ್ವಕಾಲಿಕ ಎತ್ತರದಲ್ಲಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ದೇಶದ ಬೆಳವಣಿಗೆಗೆ ಇದು ನೆರವಾಗಲಿದೆ ಎಂದು ಹೇಳಿದರು.

ಕಳೆದ ಮೂರು ದಶಕಗಳಲ್ಲಿಯೇ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆಯಾಗಿದೆ. 16ನೇ ಲೋಕಸಭೆಯ ಬಗ್ಗೆ ಹೆಮ್ಮೆಪಡಬೇಕು ಏಕೆಂದರೆ ಈ ಸದನದಲ್ಲಿ ಅತಿಹೆಚ್ಚು ಮಹಿಳಾ ಸದಸ್ಯರು ಚುನಾಯಿತರಾಗಿದ್ದಾರೆ. ಮೊದಲ ಬಾರಿಗೆ 44 ಮಹಿಳಾ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಲೋಕಸಭೆಯು ಹೆಚ್ಚು ಫಲ ನೀಡಿದೆ. ಇದೊಂದು ಉತ್ತಮ ಬೆಳವಣಿಗೆ. ಸಂಸದೀಯ ವ್ಯವಹಾರಗಳ ಸಚಿವಾಲಯದ ತಮ್ಮ ಸೇವೆಗಾಗಿ ವೆಂಕಯ್ಯ ನಾಯ್ಡು ಮತ್ತು ದಿ. ಅನಂತ್‌ ಕುಮಾರ್‌ ಜೀ ಅವರನ್ನು ಶ್ಲಾಘಿಸುತ್ತೇನೆ. ಕಳೆದ ಐದು ವರ್ಷದಿಂದಲೂ ಉತ್ತಮವಾಗಿ ಸದನವನ್ನು ನಡೆಸಿದ್ದಕ್ಕಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಆರ್ಥಿಕವಾಗಿ ಭಾರತ ಪ್ರಬಲವಾಗಲು ಎಲ್ಲರ ಸಹಕಾರವಿದೆ. ಐದು ವರ್ಷಗಳಲ್ಲಿ ಭಾರತದ ವಿದೇಶಿ ನೀತಿ ಬದಲಾಗಿದೆ. ವಿಶ್ವದಲ್ಲೇ ಭಾರತ ಆರ್ಥಿಕವಾಗಿ 6ನೇ ಸ್ಥಾನದಲ್ಲಿದೆ. ಐದು ವರ್ಷಗಳಲ್ಲಿ ಭಾರತ ವಿಶ್ವದ ಗಮನ ಸೆಳೆದಿದೆ. ಡಿಜಿಟಲ್​ ಕ್ಷೇತ್ರದಲ್ಲಿ ಭಾರತ ಗಣನೀಯ ಸಾಧನೆಗೈದಿದೆ ಎಂದರು.

ಸದನದಲ್ಲಿ ಆಡ್ವಾಣಿಯವರದು ಪೂರ್ಣ ಪ್ರಮಾಣದ ಹಾಜರಿಯಾಗಿದ್ದು,ಅವರನ್ನು ಶ್ಲಾಘಿಸುತ್ತೇನೆ. ಕಾಂಗ್ರೆಸ್‌ನ ಸಂಸತ್‌ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಸಂಸತ್ ಕಲಾಪದಲ್ಲಿ ತಪ್ಪದೆ ಪಾಲ್ಗೊಳ್ಳುವ ಬಗ್ಗೆ ಶ್ಲಾಘಿಸಿದರು. ಖರ್ಗೆ ಅವರ ಭಾಷಣ ನಮಗೂ ಪ್ರೇರೇಪಣೆ ಆಗಿದೆ ಎಂದು ತಿಳಿಸಿದರು. (ಏಜೆನ್ಸೀಸ್)