ಪಾಕ್​ ವೈಮಾನಿಕ ದಾಳಿ ಹಿಮ್ಮೆಟ್ಟಿಸಲು ನೆರವಾದ ಸ್ಕ್ವಾಡ್ರನ್​ ಲೀಡರ್​ ಮಿಂಟಿ ಅಗರ್​ವಾಲ್​ಗೆ ಯುದ್ಧ ಸೇವಾ ಪದಕ

ನವದೆಹಲಿ: ಪಾಕ್​ನ ಬಾಲಾಕೋಟ್​ನಲ್ಲಿದ್ದ ಭಯೋತ್ಪಾದಕ ಸಂಘಟನೆಗಳ ನೆಲೆಗಳ ಮೇಲಿನ ಭಾರತೀಯ ವಾಯುಪಡೆಯ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಪಾಕ್​ನ ವಾಯುಪಡೆ ಮಾಡಿದ ಪ್ರಯತ್ನವನ್ನು ವಿಫಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಮಹಿಳಾ ಸ್ಕ್ವಾಡ್ರನ್​ ಲೀಡರ್​ ಮಿಂಟಿ ಅಗರ್​ವಾಲ್​ ವಾಯುಪಡೆಯ ಯುದ್ಧ ಸೇವಾ ಪದಕ ಗೌರವಕ್ಕೆ ಭಾಜನರಾಗಿದ್ದಾರೆ.

ಯುದ್ಧ, ಉದ್ವಿಗ್ನ ಪರಿಸ್ಥಿತಿ ಅಥವಾ ಹೊಯ್​ಕೈ ಸಂದರ್ಭದಲ್ಲಿ ದಿಟ್ಟತನದಿಂದ ಹೋರಾಡುವ ಯೋಧರಿಗೆ ಯುದ್ಧ ಸೇವಾ ಪದಕವನ್ನು ಕೊಟ್ಟು ಗೌರವಿಸಲಾಗುತ್ತದೆ.

ಫೆ.27ರಂದು ಪಾಕ್​ ವಾಯುಪಡೆಯ ವಿಮಾನಗಳು ಭಾರತದ ಮೇಲೆ ದಂಡೆತ್ತಿ ಬಂದಾಗ ಕರ್ತವ್ಯನಿರತರಾಗಿದ್ದ ಏಳು ವಿಮಾನಗಳ ನಿಯಂತ್ರಕರ ತಂಡದಲ್ಲಿ ಸ್ಕ್ವಾಡ್ರನ್​ ಲೀಡರ್​ ಮಿಂಟಿ ಅಗರ್​ವಾಲ್​ ಕೂಡ ಇದ್ದರು. ಪಾಕ್​ನ ಯುದ್ಧವಿಮಾನಗಳ ದಾಳಿಯನ್ನು ಹಿಮ್ಮೆಟ್ಟಿಸಲು ಮುಂದಾದ ಭಾರತೀಯ ವಾಯುಪಡೆ ಯುದ್ಧವಿಮಾನಗಳ ಪೈಲಟ್​ಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ಇವರು ತೊಡಗಿಕೊಂಡಿದ್ದರು.

ವಿಶೇಷವಾಗಿ ಇವರು ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿದ್ದ ಯುದ್ಧವಿಮಾನಕ್ಕೆ ಸೂಕ್ತ ನಿರ್ದೇಶನ ನೀಡಲು ತೊಡಗಿಕೊಂಡಿದ್ದರು. ಇವರು ಕೊಟ್ಟ ಸೂಚನೆಯ ಮೇರೆಗೆ ಅಭಿನಂದನ್​ ವರ್ಧಮಾನ್​ ಅವರು ಪಾಕ್​ನ ಎಫ್​16 ಯುದ್ಧವಿಮಾನವನ್ನು ಹೊಡೆದುರುಳಿಸಿ ಇತಿಹಾಸ ನಿರ್ಮಿಸಿದರು. ಇದಾದ ಬಳಿಕ ಸರಿಯಾದ ಸಮಯದಲ್ಲಿ ಹಿಂದಿರುಗುವಂತೆ ಮಿಂಟಿ ಅಗರ್​ವಾಲ್​ ಅವರು ಅಭಿನಂದನ್​ ಅವರಿಗೆ ಸೂಚನೆ ನೀಡಿದ್ದರು. ಅಷ್ಟರಲ್ಲೇ ಪಾಕಿಸ್ತಾನಿ ವಾಯುಪಡೆ ನಿಯಂತ್ರಕರು ಅಭಿನಂದನ್​ ಅವರಿದ್ದ ಮಿಗ್​ 21 ಬೈಸನ್​ನ ಸಂವಹನ ವ್ಯವಸ್ಥೆಯನ್ನು ಜ್ಯಾಮ್​ ಮಾಡಿದ್ದರು. ಹೀಗಾಗಿ, ಮಿಂಟಿ ಅವರು ಕೊಟ್ಟ ಸೂಚನೆಯನ್ನು ಕೇಳಿಸಿಕೊಳ್ಳಲಾಗದೆ ಅಭಿನಂದನ್​ ಅವರಿದ್ದ ವಿಮಾನ ಪಾಕ್​ ಯೋಧರ ದಾಳಿಗೆ ತುತ್ತಾಗಿ ಪತನಗೊಂಡು, ಅವರು ವಿಮಾನದಿಂದ ಹೊರಜಿಗಿದು ಪಾಕ್​ ಯೋಧರ ಕೈಗೆ ಸಿಕ್ಕಿ ಬೀಳಬೇಕಾಯಿತು.

ಅಭಿನಂದನ್​ 60 ಗಂಟೆ ಪಾಕ್​ನ ವಶದಲ್ಲಿದ್ದರು. ಅವರ ಬಿಡುಗಡೆಗಾಗಿ ಜಾಗತಿಕ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಘೋಷಿಸಿ, ಅವರನ್ನು ಬಿಡುಗಡೆಗೊಳಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *