ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಮೋದಿ ವಿಜಯ ಸಂಕಲ್ಪ ಯಾತ್ರೆ ನಿಮಿತ್ತ ಬೀದರ್ ಹಾಗೂ ಕಲಬುರಗಿ ಲೋಕಸಭಾ ವ್ಯಾಪ್ತಿಯ ಬೂತ್ ಸಮಿತಿ ಪದಾಧಿಕಾರಿಗಳ ಹಾಗೂ ಪ್ರಮುಖ ಕಾರ್ಯಕರ್ತರ ಬೃಹತ್ ಸಮಾವೇಶ ರಾಮಚಂದ್ರ ವೀರಪ್ಪ ಪದವಿ ಕಾಲೇಜು ಪಕ್ಕದ ಮೈದಾನದಲ್ಲಿ ಶುಕ್ರವಾರ ಬೆಳಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬೀದರ್ ಲೋಕಸಭಾ ಬಿಜೆಪಿ ಸಂಚಾಲಕ, ಮಾಜಿ ಶಾಸಕ ಸುಭಾಷ ಕಲ್ಲೂರ ತಿಳಿಸಿದ್ದಾರೆ.

ಬೀದರ್ ಲೋಕಸಭೆ ಪ್ರತಿ ಬೂತ್ನಿಂದ ಅಧ್ಯಕ್ಷ, ಕಾರ್ಯದರ್ಶಿ, ಬಿಎಲ್ಎ 2 ಹಾಗೂ ಬೂತ್ ಉಸ್ತುವಾರಿ ಸೇರಿ 250 ಬೂತ್ಗಳಿಂದ 8000 ಹಾಗೂ ಕಲಬುರಗಿಯಿಂದ 400 ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಕೃಷಿ ಸಚಿವ ಪುರುಷೋತ್ತಮ ರುಪಾಲ್ ಸಮಾವೇಶ ಉದ್ಘಾಟಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮುಖಂಡರಾದ ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ್, ಸಂಸದ ಭಗವಂತ ಖೂಬಾ ಇತರರು ಭಾಗವಹಿಸಲಿದ್ದಾರೆ.

ಬೀದರ್ ಹಾಗೂ ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪಕ್ಷ ಸಂಘಟನೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ 5 ವರ್ಷದಲ್ಲಿ ಮೋದಿ ನೇತೃತ್ವದ ಸರ್ಕಾ ರ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದ ಅವರು, ಸಮಾವೇಶ ಯಶಸ್ವಿಗೆ ಬೂತ್ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಸೋಮನಾಥ ಪಾಟೀಲ್, ವಿಶ್ವನಾಥ ಪಾಟೀಲ್ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ್, ಸೂರ್ಯಕಾಂತ ಮಠಪತಿ, ಮಲ್ಲಿಕಾರ್ಜುನ ಕುಂಬಾರ, ವಿಜಯಕುಮಾರ ದುರ್ಗಾದ, ಓಂಕಾರ ತುಂಬಾ, ಅವಿನಾಶ ಪೋಲ್ದಾಸ್ ಇತರರಿದ್ದರು.