ಮೋದಿ ಹೆಸರಲ್ಲೇ ಕಮಲ ಪ್ರಚಾರ

ವೇಣುವಿನೋದ್ ಕೆಎಸ್.ಮಂಗಳೂರು

ಎರಡೂ ಪ್ರಮುಖ ಪಕ್ಷಗಳಿಗೆ ಇನ್ನೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಹಲವರಿದ್ದರೆ ಯಾರಿಗೆ ಟಿಕೆಟ್ ಸಿಗುವುದೋ ಎನ್ನುವ ಗೊಂದಲದಲ್ಲಿ ಕಾರ್ಯಕರ್ತರು… ಆದರೆ ಅಭ್ಯರ್ಥಿ ಘೋಷಣೆಯಾಗದಿದ್ದರೂ ‘ಮೋದಿ ಮತ್ತೊಮ್ಮೆ’ ಎನ್ನುವ ಅಸ್ತ್ರವೊಂದನ್ನೇ ಹಿಡಿದು ಪ್ರಚಾರ ಭರಾಟೆ ಪ್ರಾರಂಭಿಸಿದ ಬಿಜೆಪಿ, ಸಂಘಪರಿವಾರ..

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿ ಇದು.

ಹಿಂದಿನಿಂದಲೂ ಅಭ್ಯರ್ಥಿಗೆ ಮಹತ್ವ ಇಲ್ಲದೆ ಪಕ್ಷ ಆಧಾರಿತವಾಗಿ ಮತ ಪಡೆಯುವ ವಿಭಿನ್ನ ಕ್ಷೇತ್ರವಾದ್ದರಿಂದ ಇದರಲ್ಲಿ ಅಚ್ಚರಿಯೂ ಇಲ್ಲ. ಮೂರನೇ ಬಾರಿಗೆ ಟಿಕೆಟ್ ಪಡೆಯುವುದಕ್ಕೆ ಯಾವುದೇ ಸಮಸ್ಯೆಯಾಗದು ಎಂದೇ ನಿರೀಕ್ಷೆಯಲ್ಲಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಕೆಲ ಕಾರ್ಯಕರ್ತರಿಂದ ಬೇಸರ ವ್ಯಕ್ತವಾಗಿದ್ದರೂ ಪಕ್ಷ ಅದನ್ನು ಪರಿಗಣಿಸಿಲ್ಲ, ಅದರ ಬದಲು ಕಾರ್ಯಕರ್ತರ ಪಡೆ ಈಗಾಗಲೇ ಗ್ರೌಂಡ್‌ವರ್ಕ್ ಶುರುಮಾಡಿದೆ.

ಅಚ್ಚರಿ ಎಂದರೆ ವ್ಯವಸ್ಥಿತ ಪ್ರಚಾರದಲ್ಲಿ ಯಾವಾಗಲೂ ಮುಂದಿರುವ ಬಿಜೆಪಿ ಕಾರ್ಯಕರ್ತರನ್ನೂ ಹಿಂದಿಕ್ಕಿ ಕ್ಷೇತ್ರಕಾರ್ಯಕ್ಕೆ ಇಳಿದಿರುವ ಸಂಘ ಪರಿವಾರ ಮೋದಿ ಪರವಾಗಿ ಜನರನ್ನು ತಲಪುವ ಯತ್ನದಲ್ಲಿದೆ. ಬಿಜೆಪಿ ಕಾರ್ಯಕರ್ತರು ಚುನಾವಣೆ ಘೋಷಣೆಯಾದ ಬಳಿಕ ಪ್ರಚಾರಕ್ಕೆ ಇಳಿದಿದ್ದರೆ ಇದಕ್ಕೆ ತಿಂಗಳ ಮೊದಲೇ ಸಂಘ ಪರಿವಾರದ ಪ್ರಮುಖರು ‘ಕೀ ವೋಟರ್ಸ್‌’ಗಳ ಭೇಟಿಗೆ ಮುಂದಾಗಿದ್ದಾರೆ.

ಇದರಲ್ಲಿನ ಕಾರ್ಯತಂತ್ರ ಸ್ಪಷ್ಟ. ಸ್ಥಳೀಯ ಅಭ್ಯರ್ಥಿ ಯಾರೆನ್ನುವುದಕ್ಕಿಂತಲೂ ದೇಶಕ್ಕೆ ಸ್ವಚ್ಛ ಆಡಳಿತ, ಸಮರ್ಥ ನಾಯಕತ್ವ ನೀಡಿದ ಪ್ರಧಾನಿ ಮೋದಿಯನ್ನು ಮತ್ತೆ ಆಯ್ಕೆ ಮಾಡುವುದಕ್ಕೆ ನೆರವಾಗಿ ಎಂದು ಕೀ ವೋಟರ್‌ಗಳನ್ನು ಮನವೊಲಿಸುವುದು. ಒಬ್ಬ ಮತ ಹಾಕುವುದಷ್ಟೇ ಅಲ್ಲ, ನೂರಾರು ಮಂದಿ ಮತ ಹಾಕುವಂತೆ ಪ್ರೇರೇಪಿಸಬೇಕು ಎನ್ನುವ ತಂತ್ರಗಾರಿಕೆ ಇಲ್ಲಿದೆ. ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದರ ಬಗ್ಗೆ ಕಾರ್ಯಕರ್ತರಂತೂ ತಲೆಕೆಡಿಸಿಕೊಂಡಿಲ್ಲ, ನಮ್ಮದೇನಿದ್ದರೂ ಮೋದಿಯವರನ್ನು ಮತ್ತೆ ಪ್ರಧಾನಿ ಗಾದಿಗೆ ಕೂರಿಸುವುದು ಎನ್ನುತ್ತಾರೆ ನಾಯಕರೊಬ್ಬರು.

ಕಾಂಗ್ರೆಸ್‌ನಲ್ಲೂ ಕೆಲಸ ಶುರು: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು ಪ್ರಚಾರದ ಜೋಷ್‌ಗೆ ಒಂದಷ್ಟು ಅಡ್ಡಿ ಉಂಟು ಮಾಡಿದೆ. ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೆಸರುಗಳು ಕೇಳಿಬರುತ್ತಿದ್ದು ಅಂತಿಮಗೊಳ್ಳಬೇಕಿದೆ. ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂತಾದವರು ಆಗಮಿಸಿ ಕಾರ್ಯಕರ್ತರ ಮೈಚಳಿ ಬಿಡಿಸುವ ಯತ್ನ ಮಾಡಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತಿಳಿಸುವ ಯತ್ನ ಮಾಡಲಾಗಿದೆ, ಅದು ಬಿಟ್ಟರೆ ದೊಡ್ಡ ಮಟ್ಟದ ಪ್ರಚಾರ ನಡೆದಿಲ್ಲ.