ಕಲ್ಲಿದ್ದಲು ಹಂಚಿಕೆ ಹಗರಣ: ಎಚ್‌ ಸಿ ಗುಪ್ತಾ ಸೇರಿ ಐವರಿಗೆ 3 ವರ್ಷ ಜೈಲು, ಕಂಪನಿಗೆ ಒಂದು ಲಕ್ಷ ದಂಡ

ನವದೆಹಲಿ: ಕೇಂದ್ರದಲ್ಲಿ ಯುಪಿಎ ಆಡಳಿತಾವಧಿಯಲ್ಲಿ ನಡೆದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಕಲ್ಲಿದ್ದಲು ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾ ಅವರಿಗೆ ಬುಧವಾರ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಇದರೊಂದಿಗೆ ಇನ್ನಿಬ್ಬರು ಅಧಿಕಾರಿಗಳಾದ ಕೆ.ಎಸ್‌. ಕ್ರೋಫಾ ಮತ್ತು ಕೆ.ಸಿ. ಸಾಮ್ರಿಯಾ ಅವರಿಗೂ ತಲಾ ಮೂರು ವರ್ಷಗಳ ಜೈಲು ಶಿಕ್ಷೆಯಾಗಿದೆ.

ವಿಶೇಷ ನ್ಯಾಯಾಧೀಶ ಭರತ್‌ ಪ್ರಸಾರ್‌ ಅವರು, ವಿಕಾಶ್‌ ಮೆಟಲ್ಸ್‌ ಮತ್ತು ಪವರ್‌ ಲಿಮಿಟೆಡ್‌ನ ಎಂಡಿ ವಿಕಾಶ್‌ ಪಾಟ್ನಿ ಮತ್ತು ಮುಖ್ಯಸ್ಥ ಆನಂದ್‌ ಮಲ್ಲಿಕ್‌ ಅವರಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದರೊಂದಿಗೆ ಕಂಪನಿಗೆ 1 ಲಕ್ಷ ದಂಡ ವಿಧಿಸಿದ್ದಾರೆ.

ಪ್ರಕರಣದ ದೋಷಿಗಳಿಗೆ ನ್ಯಾಯಾಲಯವು ಕನಿಷ್ಠ ಒಂದು ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅದರಂತೆ ಸಿಬಿಐ ವಿಶೇಷ ನ್ಯಾಯಾಲಯವು ಐವರು ಆಪರಾಧಿಗಳಿಗೆ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಖಾಸಗಿ ಕಂಪನಿಗೆ ಗರಿಷ್ಠ ದಂಡ ವಿಧಿಸಿದೆ.

ಏನಿದು ಪ್ರಕರಣ?

ಪಶ್ಚಿಮ ಬಂಗಾಳದ ಉತ್ತರದ ಮೊಯಿರಾ ಮತ್ತು ದಕ್ಷಿಣದ ಮಧುಜೋರ್‌ ಎಂಬಲ್ಲಿನ ಕಲ್ಲಿದ್ದಲು ನಿಕ್ಷೇಪಗಳನ್ನು ವಿಕಾಶ್‌ ಮೆಟಲ್ಸ್‌ ಮತ್ತು ಪವರ್‌ ಲಿಮಿಟೆಡ್‌ಗೆ(ವಿಎಂಪಿಎಲ್‌) ಹಂಚುವಲ್ಲಿ ನಡೆದ ಅವ್ಯವಹಾರವಾಗಿದ್ದು, ಸಿಬಿಐ 2012ರ ಸೆಪ್ಟೆಂಬರ್‌ನಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.

ಈ ಸಂಬಂಧ ವಿಶೇಷ ನ್ಯಾಯಾಲಯವು ನ. 30ರಂದು ಮಾಜಿ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಎಚ್‌. ಸಿ. ಗುಪ್ತಾ, ಮಾಜಿ ಜಂಟಿ ಕಾರ್ಯದರ್ಶಿ ಕ್ರೋಫಾ ಮತ್ತು ಸಚಿವಾಲಯದ ನಿರ್ದೇಶಕ ಸಾಮ್ರಿಯಾ ಅವರು ಸೇರಿ ಐವರನ್ನು ಮತ್ತು ವಿಕಾಸ್‌ ಮೆಟಲ್‌ ಪವರ್‌ ಲಿಮಿಟೆಡ್‌ ಕಂಪೆನಿಯನ್ನು ದೋಷಿ ಎಂಬುದಾಗಿ ತೀರ್ಪು ನೀಡಿತ್ತು. (ಏಜೆನ್ಸೀಸ್)