ಸಿಬಿಐ V/S ಸಿಬಿಐ: ಸೋಮವಾರದವರೆಗೆ ರಾಕೇಶ್‌ ಅಸ್ಥಾನ ಬಂಧಿಸಬಾರದು ಎಂದ ಕೋರ್ಟ್

ನವದೆಹಲಿ: ಸಿಬಿಐ ವರ್ಸಸ್‌ ಸಿಬಿಐ ಎನ್ನುವಂತಾಗಿರುವ ಸಿಬಿಐನ ಆಂತರಿಕ ಕಚ್ಚಾಟವು ಕೋರ್ಟ್‌ ಮೆಟ್ಟಿಲೇರಿದ್ದು, ಎರಡನೇ ಅಧಿಕಾರಿಯಾಗಿರುವ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನ ಅವರನ್ನು ಸೋಮವಾರದವರೆಗೂ ಬಂಧಿಸಬಾರದು ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ.

ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದ ರಾಕೇಶ್‌ ಅಸ್ಥಾನ ಅವರ ಮೇಲೆ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಹಾಗಾಗಿ ತಮ್ಮ ಬಂಧನದ ಭೀತಿಯ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ರಾಕೇಶ್‌ ಆಸ್ಥಾನ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್‌, ಪ್ರಕರಣವನ್ನು ಮುಂದಿನ ಹಂತಕ್ಕೆ ತೆಗೆದುಕೊಳ್ಳುವವರೆಗೂ ಅಂದರೆ ಸೋಮವಾರದ ತನಕದವರೆಗೂ ರಾಜೇಶ್‌ ಅವರನ್ನು ಬಂಧಿಸಬಾರದು ಎಂದು ಹೇಳಿದೆ. ಸಿಬಿಐ ಮತ್ತು ಮುಖ್ಯಸ್ಥ ಅಲೋಕ್‌ ಮರ್ಮಾ ಅವರಿಗೆ ನೋಟಿಸ್‌ ನೀಡಿದ್ದು, ಪ್ರಕರಣದ ಸ್ವರೂಪ ಮತ್ತು ಗಂಭೀರತೆಯನ್ನು ಆಧರಿಸಿ ತಡೆಯನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಆಸ್ಥಾನ ಅವರ ವಕೀಲರು, ನನ್ನ ಕಕ್ಷಿದಾರರಿಗೆ ಬಂಧನ ಮತ್ತು ದಬ್ಬಾಳಿಕೆಯ ಕ್ರಮಗಳ ಕುರಿತು ಭೀತಿಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಭ್ರಷ್ಟಾಚಾರ ಆರೋಪದ ಮೇಲೆ ಸಿಬಿಐನ ಎಫ್‌ಐಆರ್‌ ಎದುರಿಸುತ್ತಿರುವ ರಾಕೇಶ್‌ ಆಸ್ಥಾನ ಮತ್ತು ಸಿಬಿಐನಿಂದ ನಿನ್ನೆಯಷ್ಟೇ ಬಂಧನಕ್ಕೊಳಗಾಗಿರುವ ಉಪ ಅಧೀಕ್ಷಕ (ಡಿವೈಎಸ್​ಪಿ) ದೇವೇಂದ್ರ ಕುಮಾರ್ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ದೇವೇಂದ್ರ ಕುಮಾರ್‌ ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿ, ಮಾಂಸ ರಫ್ತುದಾರ ಮೊಯಿನ್ ಖುರೇಷಿ ಅವರ ವಿರುದ್ಧದ ಪ್ರಕರಣವನ್ನು ಹಳಿ ತಪ್ಪಿಸುವ ಸಲುವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ದೂರಿದ್ದಾರೆ.

ಮೊಯಿನ್ ಖುರೇಷಿ ವಿರುದ್ಧ 2017ರಲ್ಲಿ ದಾಖಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹಿರಿಯ ಅಧಿಕಾರಿ ರಾಕೇಶ್ ಅಸ್ಥಾನ ಮೇಲ್ವಿಚಾರಣೆಯ ತಂಡದಲ್ಲಿ ಡಿವೈಎಸ್​ಪಿ ದೇವೇಂದ್ರ ಕುಮಾರ್ ತನಿಖಾಧಿಕಾರಿಯಾಗಿದ್ದರು. ಈ ವೇಳೆ ಮೊಯಿನ್​ನಿಂದ ಅಸ್ಥಾನ ಲಂಚ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇವೇಂದ್ರ ಕುಮಾರ್‌ ಕೂಡ ಭಾಗಿಯಾಗಿದ್ದಾರೆ ಎಂದು ಸಿಬಿಐ ಹೇಳಿತ್ತು. ಹಾಗಾಗಿ ಅವರನ್ನು 10 ದಿನಗಳ ಸಿಬಿಐ ವಶಕ್ಕೆ ಪಡೆದಿತ್ತು.

ಮೊಯಿನ್‌ ಖುರೇಷಿ ಪ್ರಕರಣದಲ್ಲಿ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಸನಾ ಹೇಳಿಕೆ ಆಧಾರದ ಮೇಲೆ ಸಿಬಿಐ ರಾಕೇಶ್‌ ಅಸ್ಥಾನ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು. ಪ್ರಕರಣದ ಖುಲಾಸೆಗಾಗಿ ಖುರೇಷಿಯಿಂದ ರಾಕೇಶ್‌ ಅವರು 2 ಕೋಟಿ ರೂ. ಲಂಚ ಪಡೆದಿರುವುದು ನಿಜವೆಂದು ಸಾಕ್ಷಿ ನುಡಿದಿದ್ದ ಸತೀಸ್ ಸನಾರ ಹೇಳಿಕೆಯನ್ನು ದೇವೇಂದ್ರ ತಿರುಚಿ ದಾಖಲಿಸಿದ್ದರು ಎನ್ನಲಾಗಿದೆ. (ಏಜೆನ್ಸೀಸ್)