ಇಲ್ಲಿ ಹಿಂದು-ಮುಸಲ್ಮಾನ್​ ಎಲ್ಲರೂ ಒಂದು; ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಾರೆ ಕಲೆತು

ಆಗ್ರಾ (ಉತ್ತರಪ್ರದೇಶ): ದೇಶದಲ್ಲಿ ಹಿಂದು-ಮುಸಲ್ಮಾನರ ನಡುವಿನ ಸಾಮರಸ್ಯಕ್ಕೆ ದಕ್ಕೆಯಾಗುತ್ತಿದೆ ಎಂಬ ಚರ್ಚೆಗಳ ನಡುವೆಯೇ ಉತ್ತರಪ್ರದೇಶದ ಆಗ್ರಾದಲ್ಲಿ ಇಡೀ ಸಮಾಜಕ್ಕೆ ಮಾದರಿ ಎನಿಸುವ ವಿಶೇಷ ಧಾರ್ಮಿಕ ಪ್ರಸಂಗವೊಂದು ನಡೆದಿದೆ. ಆಗ್ರಾದ ಖೇರಿಯಾ ಮೋದ್ ಎಂಬಲ್ಲಿರುವ ಹಿಂದು-ಮುಸಲ್ಮಾನರು ಒಂದೆಡೆ ಕಲೆತು ಕೃಷ್ಣ ಜನ್ಮಾಷ್ಟಮಿ ಆಚರಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದ್ದಾರೆ.

‘ಖೇರಿಯಾ ಮೋದ್​ನಲ್ಲಿ ಜನ್ಮಾಷ್ಟಮಿಯನ್ನು ಕಳೆದ ಹದಿನೈದು ವರ್ಷಗಳಿಂದಲೂ ಹಿಂದು-ಮುಸಲ್ಮಾನರು ಒಟ್ಟಿಗೆ ಸೇರಿ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿಯೂ ಅದೇ ರೀತಿ ಎಲ್ಲರೂ ಒಟ್ಟುಗೂಡಿ ಆಚರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿ ಎಂಡಿ ಶಾದಿಲ್​ ಖುರೇಷಿ, ಜನ್ಮಾಷ್ಟಮಿಗಾಗಿ ನಾವು ಏಳು ತಿಂಗಳಿನಿಂದಲೇ ಸಿದ್ಧತೆಗಳನ್ನು ಆರಂಭಿಸಿದ್ದೆವು. ಜನ್ಮಾಷ್ಟಮಿಯಂದು ಆಯೋಜಿಸಿರುವ ಈ ಕಾರ್ಯಕ್ರಮ ಯಶಸ್ವಿಯಾಗಲು ಹಿಂದು-ಮುಸಲ್ಮಾನರು ಸಾಕಷ್ಟು ಶ್ರಮಿಸಿದ್ದಾರೆ. ಜನ್ಮಾಷ್ಟಮಿಯನ್ನು ಆಚರಿಸಲು ಧರ್ಮ ಜಾತಿಗಳ ಸಂಕೋಲೆ ಇಲ್ಲ ಎಂದು ನಾವು ಭಾವಿಸಿದ್ದೇವೆ. ಹದಿನೈದು ವರ್ಷಗಳಿಂದ ನಾವು ಇದನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮಕ್ಕಳೂ ಇದನ್ನು ಮುಂದುವರೆಸಿಕೊಂಡು ಹೋಗಬೇಕೆಂದೂ, ಹಿಂದು-ಮುಸಲ್ಮಾನರು ಸಾಮರಸ್ಯದಿಂದ ಇರಬೇಕೆಂದು ನಾನು ಬಯಸುತ್ತೇನೆ,” ಎಂದು ಹೇಳಿದ್ದಾರೆ.

“ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಬೇಕು ಎಂಬುದೇ ನಮ್ಮ ಉದ್ದೇಶ,” ಎಂದು ಪ್ರಾದೇಶಿಕ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹರಿಶಂಕರ್​ ಶುಕ್ಲಾ ಎಂಬುವವರು ತಿಳಿಸಿದ್ದಾರೆ.

ಆಗ್ರಾದ ಕೇರಿಯಾ ಮೋದ್​ನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಗಣೇಶ ಉತ್ಸವದಂತೆ ಆಚರಿಸಲಾಗುತ್ತದೆ. ಕಳೆದ ಹದಿನೈದು ವರ್ಷಗಳಿಂದಲೂ ಈ ಸತ್​ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಈ ಪ್ರದೇಶದಲ್ಲಿ ಜನ್ಮಾಷ್ಟಮಿಗೆ ಬೃಹತ್​ ಬ್ಯಾನರ್​ಗಳನ್ನು ಹಾಕಿ ಎರಡೂ ಸಮುದಾಯಗಳಿಗೆ ಪರಸ್ಪರ ಶುಭ ಕೋರಲಾಗುತ್ತದೆ. ಬ್ಯಾನರ್​ನಲ್ಲಿ ಒಂದು ಕಡೆ ಹಿಂದುಗಳ ಧಾರ್ಮಿಕ ಗುರುತು ಇದ್ದರೆ, ಮತ್ತೊಂದು ಕಡೆಯಲ್ಲಿ ಮುಸಲ್ಮಾನರ ಧಾರ್ಮಿಕ ಗುರುತುಗಳನ್ನು ಹಾಕಲಾಗಿರುತ್ತದೆ.