ವಿಶ್ರಾಂತ ಭಾವದಲ್ಲಿ ದಿನಗಳೆದ ಡಾ.ವಿ.ಎಸ್.ಸಾಧುನವರ

ಬೈಲಹೊಂಗಲ: ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಒಂದು ತಿಂಗಳಿಂದ ನಡೆದ ಚುನಾವಣಾ ಪ್ರಚಾರದ ಮೂಡ್‌ನಿಂದ ಹೊರಬಂದು ಬೈಲಹೊಂಗಲ ಮೃತ್ಯುಂಜಯ ನಗರದ ಮನೆಯಲ್ಲಿ ತಾಯಿ ಗಂಗಮ್ಮ, ಪತ್ನಿ ಉಷಾ, ಮಕ್ಕಳಾದ ಕಿರಣ, ಕೃಪಾ, ಶೃತಿ, ತೃಪ್ತಿ, ಪೂಜಾ ಹಾಗೂ ಸಂಬಂಧಿಕರೊಂದಿಗೆ ಕಾಲ ಕಳೆದರು.

ಮತದಾನ ಅವಧಿ ಮುಗಿದ ನಂತರ ಮಂಗಳವಾರ ರಾತ್ರಿ 8 ಗಂಟೆವರೆಗೆ ಯಾವ ಯಾವ ಕ್ಷೇತ್ರಗಳಲ್ಲಿ ಹಾಗೂ ಮತಗಟ್ಟೆಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎಂಬ ಮಾಹಿತಿಯನ್ನು ತಮ್ಮ ಏಜೆಂಟರು ಹಾಗೂ ಕಾರ್ಯಕರ್ತರಿಂದ ಪಡೆದ ಅವರು, ಎಷ್ಟು ಮತಗಳು ಲಭಿಸಲಿವೆ ಎಂದು ಚರ್ಚಿಸಿದರು.

ರೂಢಿಯಂತೆ ಬುಧವಾರ ಬೆಳಗ್ಗೆ ಸುಮಾರು ಒಂದು ಗಂಟೆ ವಾಯುವಿಹಾರಕ್ಕೆ ತೆರಳಿದ್ದ ಅವರು ಪೂಜೆ, ಪುನಸ್ಕಾರದ ನಂತರ ಉಪಾಹಾರ ಸೇವಿಸಿ, ಮನೆಯಂಗಳದ ಸಸಿಗಳಿಗೆ ನೀರುಣಿಸಿ ತಮ್ಮ ಕುಟುಂಬ ಹಾಗೂ ಸಂಬಂಧಿಕರ ಜತೆ ಚುನಾವಣೆ ಫಲಿತಾಂಶ ಕುರಿತು ಚರ್ಚೆ ನಡೆಸಿದರು. ನಂತರ ಮನೆಗೆ ಬಂದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.

ಮಧ್ಯಾಹ್ನದ ಹೊತ್ತು ಎರಡು ಗಂಟೆ ವಿಶ್ರಾಂತಿ ಪಡೆದು ಸಂಜೆ ತಮ್ಮ ಮೊಮ್ಮಕ್ಕಳೊಂದಿಗೆ ಕಾಲ ಕಳೆದು ಸಂತೋಷಪಟ್ಟರು. ಪ್ರಮುಖ ಕಾರ್ಯಕರ್ತರೊಂದಿಗೆ ದೂರವಾಣಿ ಮೂಲಕ ಹಾಗೂ ಹಲವರನ್ನು ಖುದ್ದಾಗಿ ಮನೆಗೆ ಕರೆಯಿಸಿಕೊಂಡು ತಮಗೆ ಲಭಿಸಲಿರುವ ಮತಗಳ ಲೆಕ್ಕಾಚಾರ ನಡೆಸಿದರು.

Leave a Reply

Your email address will not be published. Required fields are marked *