ಸುಪ್ರೀಂಕೋರ್ಟ್​ನ 69 ವರ್ಷಗಳ ಇತಿಹಾಸದಲ್ಲೇ ಈ ರೀತಿಯ ಕ್ರಮ ಇದೇ ಮೊದಲಾಗಿದೆ: ಏನದು ಕ್ರಮ?

ನವದೆಹಲಿ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪದ ವಿಚಾರಣೆಗಾಗಿ ಸುಪ್ರೀಂಕೋರ್ಟ್​ನ ಮೂವರು ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ವಿರುದ್ಧ ಕೇಳಿ ಬಂದಿರುವ ಆರೋಪದ ತನಿಖೆಗಾಗಿ ಈ ರೀತಿಯ ಸಮಿತಿ ರಚನೆಗೊಂಡಿರುವುದು ಸುಪ್ರೀಂಕೋರ್ಟ್​ನ 69 ವರ್ಷದ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎಸ್​.ಎ. ಬಾಬ್ಡೆ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ನ್ಯಾಯಮೂರ್ತಿಗಳಾದ ಎನ್​.ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಸಮಿತಿಯ ಸದಸ್ಯರಾಗಿರುತ್ತಾರೆ. ಸುಪ್ರೀಂಕೋರ್ಟ್​ನ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ಈ ಸಮಿತಿಯ ರಚನೆಯನ್ನು ಅನುಮೋದಿಸಿದೆ.

ಸಮಿತಿಯು ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯು ಶುಕ್ರವಾರ ಮೊದಲ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಾಬ್ಡೆ ನೇತೃತ್ವದ ಸಮಿತಿಯು ಸುಪ್ರೀಂಕೋರ್ಟ್​ನ ಪ್ರಧಾನ ಕಾರ್ಯದರ್ಶಿ ಸಂಜೀವ್​ ಕಾಲ್ಗಾಂವ್ಕರ್​ ಮತ್ತು ದೂರುದಾರರಾದ ಮಾಜಿ ಕಿರಿಯ ಸಹಾಯಕಿಗೆ ನೋಟಿಸ್​ ಜಾರಿ ಮಾಡಿ, ಶುಕ್ರವಾರದ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದೆ.

ವಜಾಗೊಂಡಿರುವ ಕಿರಿಯ ಸಹಾಯಕಿ ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲೆಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಸೇರಿ ಎಲ್ಲ ದಾಖಲಾತಿಗಳನ್ನು ವಿಚಾರಣೆಗೆ ತರುವಂತೆ ಕಾಲ್ಗಾಂವ್ಕರ್​ಗೆ ಸಮಿತಿಯು ಸೂಚಿಸಿದೆ.

ಆರೋಪ ನಿರಾಕರಿಸಿರುವ ಸಿಜೆಐ: ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ತಮ್ಮ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳದ ಆರೋಪ ಸುಳ್ಳು ಎಂದು ಈಗಾಗಲೆ ಹೇಳಿದ್ದಾರೆ. ತಮ್ಮನ್ನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಬಹುದೊಡ್ಡ ಪಟ್ಟಭದ್ರ ಹಿತಾಸಕ್ತಿಗಳು ತೆರೆಮರೆಯಲ್ಲಿ ನಿಂತು ಷಡ್ಯಂತ್ರಗಳನ್ನು ರೂಪಿಸಿ, ಇಂಥ ಮಿಥ್ಯಾರೋಪ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಆದರೂ ಈ ಪ್ರಕರಣದ ಕುರಿತು ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬಯಲಿಗೊಳಿಸಲು ಸುಪ್ರೀಂಕೋರ್ಟ್​ನ 7 ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠ ತನಿಖಾ ಸಮಿತಿ ರಚಿಸಲು ನಿರ್ಧರಿಸಿತು. ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನವೆಂಬರ್​ 18ರಂದು ನಿವೃತ್ತರಾದ ಬಳಿಕ ಸಿಜೆಐ ಆಗಲಿರುವ ನ್ಯಾಯಮೂರ್ತಿ ಎಸ್​.ಎ ಬಾಬ್ಡೆ ಸಮಿತಿಯ ಅಧ್ಯಕ್ಷರಾಗಿದ್ದರೆ, 2021ರ ಏಪ್ರಿಲ್​ 24ರಂದು ಇವರ ನಿವೃತ್ತಿ ಬಳಿಕ ಸಿಜೆಐ ಅಗಲಿರುವ ನ್ಯಾಯಮೂರ್ತಿ ರಮಣ ಮತ್ತು ಕಳೆದ ವರ್ಷ ಆಗಸ್ಟ್​ 7ರಂದು ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಇಂದಿರಾ ಬ್ಯಾನರ್ಜಿ ಸಮಿತಿಯ ಸದಸ್ಯರಾಗಿದ್ದಾರೆ.

ಇಂಥ ಆರೋಪದ ಕುರಿತು ಆಂತರಿಕ ತನಿಖೆ ನಡೆಸಬೇಕು ಎಂಬುದು ಸುಪ್ರೀಂಕೋರ್ಟ್​ನ ವಕೀಲರ ಸಂಘ ಮತ್ತು ಎಸ್​ಸಿ ಅಡ್ವೊಕೇಟ್ಸ್​ ಆನ್​ ರೆಕಾರ್ಡ್​ ಅಸೋಸಿಯೇಷನ್​ನ ಬೇಡಿಕೆಯಾಗಿತ್ತು. ಇದಕ್ಕೆ ಪೂರಕವಾಗಿ ತನಿಖಾ ಸಮಿತಿ ರಚಿಸಲ್ಪಟ್ಟಿದೆ. ತಮ್ಮ ವಿರುದ್ಧದ ಆರೋಪದ ವಿಚಾರಣೆ ವೇಳೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನ್ಯಾಯಮೂರ್ತಿ ಬಾಬ್ಡೆ ಅವರಿಗೆ ಸಿಜೆಐ ರಂಜನ್​ ಗೊಗೊಯ್​ ಅನುಮತಿ ನೀಡಿದ್ದಾರೆ. (ಏಜೆನ್ಸೀಸ್​)