ಕಾಶ್ಮೀರ ಸಮಸ್ಯೆ ಬಗೆಹರಿಸುವ ಇಮ್ರಾನ್​ ಮಾತು ಹಗಲುಗನಸು ಎಂದ ಬಿಜೆಪಿ ನಾಯಕ ಸ್ವಾಮಿ

ನವದೆಹಲಿ: ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂಬ ಪಾಕಿಸ್ತಾನದ ಸಂಭಾವ್ಯ ಪ್ರಧಾನ ಮಂತ್ರಿ ಇಮ್ರಾಜ್​ ಖಾನ್​ ಅವರ ಅಭಿಲಾಷೆಯನ್ನು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್​ ಸ್ವಾಮಿ ಅವರು ಹಗಲುಗನಿಸಿಗೆ ಹೋಲಿಕೆ ಮಾಡಿದ್ದಾರೆ.

ಸುದ್ದಿ ಸಂಸ್ಥೆ ಎಎನ್​ಐನೊಂದಿಗೆ ಇಂದು ದೆಹಲಿಯಲ್ಲಿ ಮಾತನಾಡಿರುವ ಅವರು, ” ಕಾಶ್ಮೀರದ ಸಮಸ್ಯೆ ಕುರಿತು ಪಾಕಿಸ್ತಾನದ ಜತೆಗೆ ಚರ್ಚೆ ಮಾಡುವ ಅಗತ್ಯವೇನೂ ಇಲ್ಲ,” ಎಂದು ಹೇಳಿದ್ದಾರೆ.

“ಇಮ್ರಾನ್​ ಖಾನ್​ ಅವರದ್ದು ಹಗಲುಗನಸು. ಅವರು ಎಲ್ಲ ವಿಚಾರದಲ್ಲೂ ಕನಸು ಕಾಣಬಹುದು. ಆದರೆ, ಕಾಶ್ಮೀರದ ಅರ್ಧ ಭಾಗವನ್ನೇ ಆಕ್ರಮಿಸಿರುವ ಪಾಕಿಸ್ತಾನದ ಜತೆಗೆ ಯಾವುದೇ ಮಾತುಕತೆ ಅಗತ್ಯವಿಲ್ಲ. ತನ್ನ ವಶದಲ್ಲಿರುವ ಕಾಶ್ಮೀರದ ಭಾಗವನ್ನು ಪಾಕಿಸ್ತಾನ ನಮಗೆ ನೀಡಬೇಕು. ಇಲ್ಲವೇ ಭವಿಷ್ಯದಲ್ಲಿ ಭಾರತದಿಂದ ಸಂಭವಿಸುವ ವಿಭಜನೆಯನ್ನು ಅವರು ಎದುರಿಸಬೇಕು” ಎಂದೂ ಸ್ವಾಮಿ ಹೇಳಿದ್ದಾರೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಅವರ ಪಿಟಿಐ (ಪಾಕಿಸ್ತಾನ ತೆಹ್ರಿಕ್​ ಇ ಇನ್ಸಾಫ್​) ಪಕ್ಷ ಮುನ್ನಡೆ ಗಳಿಸಿದ್ದು, ಇಮ್ರಾನ್ ದೇಶದ ಪ್ರಧಾನಿಯಾಗುವ ತಯಾರಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಗುರುವಾರ ಮಾತನಾಡಿದ್ದ ಇಮ್ರಾನ್​, ಮಾತುಕತೆ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಮಾತುಗಳನ್ನಾಡಿದ್ದರು.